7 ವಿದ್ಯಾರ್ಥಿಗಳಿಗೆ ಜೂನಿಯರ್ ಜೀನಿಯಸ್ ಆವಾರ್ಡ್

Junior Genius Award for 7 students
ಮುದ್ದೇಬಿಹಾಳ ತಾಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆಕ್ಸಫರ್ಡ್ ಜೂನಿಯರ್ ಜೀನಿಯಸ್ ಆವಾರ್ಡ ಸ್ಪರ್ಧೆಯಲ್ಲಿ ವಿಜೇತರಾದ ಬಿದರಕುಂದಿಯ ಸೇಜಲ್ ಮಳ್ಳಿ, ಬಾಗಲಕೋಟೆಯ ನಿಂಗರಾಜ ಹಿರೇನಿಂಗಪ್ಪನವರ ಅವರಿಗೆ ಟ್ರೋಫಿ ನೀಡಿ ಪುರಸ್ಕರಿಸಲಾಯಿತು. ಮುದನೂರಿನ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಚೇರ್ಮನ್ ಎಂ.ಎಸ್. ಪಾಟೀಲ, ಆಡಳಿತ ಮಂಡಳಿಯ ನಿರ್ದೇಶಕ ದರ್ಶನಗೌಡ ಪಾಟೀಲ, ಕಾಶಿನಾಥ ಸಜ್ಜನ, ಆರ್.ಜಿ. ಕಿತ್ತೂರ, ಸಂಗಮೇಶ ಹೂಗಾರ, ಗುರುರಾಜ ಕನ್ನೂರ, ಇಸ್ಮಾಯಿಲ್ ಮನಿಯಾರ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗುಡ್ಡದ ಹತ್ತಿರವಿರುವ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಆಕ್ಸಫರ್ಡ್ ಜೂನಿಯರ್ ಜೀನಿಯಸ್ ಆವಾರ್ಡ್- 2024 ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು ಜೂನಿಯರ್ ಜೀನಿಯಸ್‌ಗಳಾಗಿ ಹೊರಹೊಮ್ಮುವ ಮೂಲಕ ನಗದು ಪುರಸ್ಕಾರ ಮತ್ತು ಟ್ರೋಫಿ ಪಡೆದುಕೊಂಡು ಸಂಭ್ರಮಿಸಿದರು.

5ನೇ ತರಗತಿಯ ಶ್ರೇಯಸ್‌ಕುಮಾರ (ಗುಡಿಹಾಳ) ಮತ್ತು ಚೈತನ್ಯ ಮುತ್ತಣ್ಣವರ್(ಮಸೂತಿ), 6ನೇ ತರಗತಿಯ ಅಜಯ್ ಜಗ್ಗಲ್ (ಸೀತಿಮನಿ), 7ನೇ ತರಗತಿಯ ಸಿಂಧೂ ಕರ್ನಾಳ (ವಿಜಯಪುರ), 8ನೇ ತರಗತಿಯ ಸೃಷ್ಟಿ ನ್ಯಾಮಣ್ಣವರ್(ವಿಜಯಪುರ) ಹಾಗೂ 9ನೇ ತರಗತಿಯ ಸೇಜಲ್ ಮಳ್ಳಿ (ಬಿದರಕುಂದಿ ಆರ್‌ಎಂಎಸ್‌ಎ) ಮತ್ತು ನಿಂಗರಾಜ ಹಿರೇನಿಂಗಪ್ಪನವರ್(ಬಾಗಲಕೋಟೆ) ಪ್ರಥಮ ಸ್ಥಾನ ಪಡೆದು ನಗದು ಪುರಸ್ಕಾರ ತಲಾ 20ಸಾವಿರ ರೂ. ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು.

5ನೇ ತರಗತಿಯ ಅನುರಾಧಾ ಕಮ್ಮಾರ (ಕುಷ್ಟಗಿ), 6ನೇ ತರಗತಿಯ ಶುಭಂ ಅವಟಿ (ಲೋಕಾಪುರ), 7ನೇ ತರಗತಿಯ ಪ್ರೇರಣಾ ಕುಲಕರ್ಣಿ (ಬಿದರಕುಂದಿ ಆರ್‌ಎಂಎಸ್‌ಎ), 8ನೇ ತರಗತಿಯ ಅದಿತಿ ರಾಜಮನ್ಯಾ (ವಿಜಯಪುರ), 9ನೇ ತರಗತಿಯ ಸಾಗರ ಪಡೇಕನೂರ(ಬಿದರಕುಂದಿ ಆರ್‌ಎಂಎಸ್‌ಎ) ಹಾಗೂ ಉಸ್ಮಾನಗಣಿ ನದಾಫ (ಮುದ್ದೇಬಿಹಾಳ) ದ್ವಿತೀಯ ಸ್ಥಾನ ಪಡೆದು ತಲಾ 15ಸಾವಿರ ನಗದು ಪುರಸ್ಕಾರ ತಮ್ಮದಾಗಿಸಿಕೊಂಡರು.

3, 4 ಮತ್ತು 5ನೇ ಸ್ಥಾನಗಳನ್ನು ಕ್ರಮವಾಗಿ 5ನೇ ತರಗತಿಯಲ್ಲಿ ನೀಲಮ್ಮ ಎಂ (ವಜ್ಜಲ), ಮಾಧುರಿ ರಾಣೆ, ವಿನಾಯಕ ಗೋನಾಳ ಮತ್ತು ವಿಶ್ವನಾಥ ಹೊನ್ನಳ್ಳಿ. 6ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ತಾಳಿಕೋಟಿ, ಸುಜೀತ್, ಶ್ರೇಯಸ್ ಮನಹಳ್ಳಿ. 7ನೇ ತರಗತಿಯಲ್ಲಿ ಕ್ರಮವಾಗಿ ಶ್ರೇಯಾ ತುಂಬಗಿ, ದೇವಿಕಾ ಭಾಗ್ಯಶ್ರೀ. 8ನೇ ತರಗತಿಯಲ್ಲಿ ಭೂಮಿಕಾ ಪಾಟೀಲ, ಸೃಷ್ಟಿ ದೇಸಾಯಿ, ಸುಪ್ರೀತ್ ಪಾಟೀಲ, ವಿಕಾಸ ತಳವಾರ, ಅಮೃತಾ ದೊಡಮನಿ, ನಾಗರಾಜ ರಂಜಣಗಿ, ಸಮರ್ಥ ನಲವಡೆ ಹಾಗೂ 9ನೇ ತರಗತಿಯಲ್ಲಿ ಕಾವ್ಯಾ ಸಜ್ಜನ, ಮೀನಾಕ್ಷಿ ಮುರಾಳ, ಸೃಷ್ಠಿ ಪಾಟೀಲ, ಹಣಮಂತ ಗುರವ ಅವರು ಸಾಧಕರಾಗಿ ಹೊರಹೊಮ್ಮಿ ನಿಗದಿಪಡಿಸಿದ ನಗದು ಪುರಸ್ಕಾರ ಪಡೆದುಕೊಂಡರು.

ಸ್ಪರ್ಧಾತ್ಮಕ ಪರೀಕ್ಷೆಯ ನಂತರ ನಡೆದ ಬಹುಮಾನ ವಿತರಣಾ ಸಮಾರಂಭವನ್ನು ಯಾದಗಿರಿ ಜಿಲ್ಲೆಯ ಮುದನೂರಿನ ಕೋರಿ ಸಿದ್ದೇಶ್ವರ ಶಾಖಾ ಮಠದ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು. ಆಕ್ಸಫರ್ಡ್ ಜೂನಿಯರ್ ಜೀನಿಯಸ್ ಆಗಿ ಹೊರಹೊಮ್ಮಿದವರಿಗೆ ನಗದು ಪುರಸ್ಕಾರ, ಟ್ರೋಫಿ ನೀಡಿ ಸತ್ಕರಿಸಲಾಯಿತು. ಇನ್ನುಳಿದ ಸಾಧಕರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರ್ಮನ್ ಎಂ.ಎಸ್. ಪಾಟೀಲ ಮಾತನಾಡಿ, ತಮ್ಮ ಸಂಸ್ಥೆಯಡಿ ನಡೆಯುತ್ತಿರುವ ಶಾಲೆ, ಕಾಲೇಜುಗಳ ಸಾಧನೆಯ ಚಿತ್ರಣ ಬಿಡಿಸಿಟ್ಟು ಮಕ್ಕಳಿಗೆ 6ನೇ ತರಗತಿಯಿಂದಲೇ ಪಿಯುಸಿ ನಂತರದ ನೀಟ್, ಐಐಟಿ, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬರುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಬಡ ಮಕ್ಕಳು ಮೆಡಿಕಲ್, ಇಂಜಿನಿಯರಿಂಗ್ ನಂತರ ಉನ್ನತ ವಿದ್ಯಾಭ್ಯಾಸ ಪಡೆಯಲು ಅನುಕೂಲ ಮಾಡಿಕೊಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾತ್ರವಲ್ಲದೆ ನೀಟ್, ಜೆಇಇ, ಐಐಟಿಯಲ್ಲೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ ಎಂದರು.

ಕೋಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಆರ್.ಜಿ. ಕಿತ್ತೂರ ಮಾತನಾಡಿ, ಮಗುವಿನಲ್ಲಿರುವ ಅಗಾಧ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಲು ಪಾಲಕರು ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ತೀರ್ಮಾನ ಕೈಕೊಳ್ಳಬೇಕು. ಪ್ರತಿಭೆ ಕಮರಿ ಹೋಗದಂತೆ ಹೆಚ್ಚಿನ ಕಾಳಜಿ ವಹಿಸುವುದು ಪಾಲಕರು, ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಆಕ್ಸಫರ್ಡ್ ಸಂಸ್ಥೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಿಸುವಲ್ಲಿ ಎಲ್ಲರಿಗಿಂತ ಮುಂದಿದೆ ಎಂದು ಶ್ಲಾಘಿಸಿದರು.

ಅಮರೇಶ ಜಾಲಿಬೆಂಚಿ, ಕಾಶಿನಾಥ ಸಜ್ಜನ, ಸಂಗಮೇಶ ಹೂಗಾರ, ಅಶೋಕ ಪೂಜಾರಿ ಮತ್ತಿತರರು ಇದ್ದರು. ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ದರ್ಶನ್‌ಗೌಡ ಪಾಟೀಲ, ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಾಧ್ಯಾಪಕ ಗುರುರಾಜ ಕನ್ನೂರ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಾರ್ಯಕ್ರಮ ನಿರ್ವಹಿಸಿದರು. 5ರಿಂದ 9 ತರಗತಿಯ ಸ್ಥಳೀಯ ಮತ್ತು ಹೊರಜಿಲ್ಲೆಯ 3,780 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net