ಚಹಾ ಮಾರಾಟ ಮಾಡಿ ಪ್ರತಿಭಟಿಸಿದ ಕಿರಿಯ ವೈದ್ಯರು

h17-kims protest 2
Published on

ಹುಬ್ಬಳ್ಳಿ: ಸ್ಟೈಫಂಡ್ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ(ಕೆಆರ್‌ಡಿ) ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ನಗರದಲ್ಲಿ ಆರನೇ ದಿನವಾದ ಶನಿವಾರವೂ ಮುಂದುವರಿಯಿತು.
ನಗರದ ಚನ್ನಮ್ಮ ವೃತ್ತ ಹಾಗೂ ಕೆಎಂಸಿ ಆಸ್ಪತ್ರೆ ಎದುರು ಸಮಾವೇಶಗೊಂಡ ವಿದ್ಯಾರ್ಥಿಗಳು ಚಹಾ ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ವೈದ್ಯ ವೃತ್ತಿ ಮಾಡುವುದಕ್ಕಿಂತ ಚಹಾ ಮಾರುವುದು ಸುರಕ್ಷಿತ ಹಾಗೂ ಲಾಭದಾಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಅಲೆದಾಡುವ ಸಾರ್ವಜನಿಕರಿಗೆ ಕರೆದು ಚಹಾ ನೀಡಿ ಪ್ರತಿಭಟನೆಗೆ ಸಹಕರಿಸಿ ಎಂದು ಮನವಿ ಮಾಡಿದರು. ಕೆಎಂಸಿ ಆಸ್ಪತ್ರೆಯ ಎದುರು ಕೂಡ ರೋಗಿಗಳು ಮತ್ತವರ ಸಂಬಂಧಿಕರಿಗೆ ಚಹಾ ನೀಡಿದರು.
ಕಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ ಎಸ್.ಟಿ. ಮಾತನಾಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ 3 ಸಾವಿರ ರೂ. ನೀಡುತ್ತಿದೆ. ಆದರೆ ವೈದ್ಯ ವೃತ್ತಿ ಸಲ್ಲಿಸುವ ನಮಗೆ ಸ್ಟೈಫಂಡ್ ಹೆಚ್ಚಳ ಮಾಡುತ್ತಿಲ್ಲ. ವೈದ್ಯರಿಗೆ ಯಾವುದೇ ರೀತಿ ಸುರಕ್ಷತೆ ಇಲ್ಲ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿಯ ಕೊಲೆ ಖಂಡನೀಯ. ಆದ್ದರಿಂದ ನಮಗೆ ಸುರಕ್ಷತೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಡಾ. ಆದರ್ಶ ಇ.ಎಚ್., ಪ್ರಧಾನ ಕಾರ್ಯದರ್ಶಿ ಡಾ. ಆದರ್ಶಾ ವಿ., ಉಪಾಧ್ಯಕ್ಷೆ ಡಾ. ಹರ್ಷಿತಾ, ಡಾ. ದೀಕ್ಷಂತ್, ಡಾ. ಸುನಿಲ್ ಆರ್., ಡಾ. ಶಶಾಂಕ, ಡಾ. ರಕ್ಷಿತ್ ಎಂ.ಸಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net