

ರಾಮನಗರ: ಕರೊನಾದೊಂದಿಗೇ ಅಭಿವೃದ್ಧಿ ಮಾಡಬೇಕಾದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಜೂ. 8ರಿಂದ ಶೇ.90 ಕಾರ್ಯಚಟುವಟಿಕೆಗಳು ಹಿಂದಿನಂತೆ ಇರಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಂಕು ಸದ್ಯಕ್ಕೆ ನಮ್ಮನ್ನು ಬಿಡುವುದಿಲ್ಲ. ಇದರೊಟ್ಟಿಗೆ ಅಭಿವೃದ್ಧಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಗೆ ಕರೊನಾ ವಲಸಿಗ ಕಾರ್ಮಿಕರಿಗಾಗಿ 30 ಲಕ್ಷ ರೂ., ಆರೋಗ್ಯ ಇಲಾಖೆ ಆರೋಗ್ಯ ಪರಿಕರಗಳ ಖರೀದಿಗೆ 50 ಲಕ್ಷ ರೂ. ಹಾಗೂ ಕೋವಿಡ್ ಲ್ಯಾಬ್ ಸೇರಿ ಇತರ ವೆಚ್ಚಗಳಿಗೆ 2.62 ಕೋಟಿ ರೂ. ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ರಾಮನಗರದಲ್ಲಿ ಕರೊನಾ ಪರೀಕ್ಷಾ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪದಡಿ ಕನಕಪುರ ಮತ್ತು ರಾಮನಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಇಲ್ಲಿಗೆ ಕ್ರಮವಾಗಿ ತಲಾ 1.53 ಕೋಟಿ ರೂ. ಮತ್ತು 1.18 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಖಾತೆಯಲ್ಲಿ 13.5 ಕೋಟಿ ರೂ.ಅನುದಾನವಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಬರಪೀಡಿತ 11 ಜಿಲ್ಲೆಗಳ 49 ತಾಲೂಕುಗಳಿಗೆ 112 ಕೋಟಿ ರೂ. ಪರಿಹಾರ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಿಗೆ 6108 ಕೋಟಿ ರೂ., ಬೆಳೆ ಹಾನಿ ಪರಿಹಾರವಾಗಿ 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ 10 ಕೋಟಿ ರೂ., ಆರೋಗ್ಯ ಇಲಾಖೆಗೆ 70 ಕೋಟಿ ರೂ., ಎಲ್ಲ ಜಿಲ್ಲಾಧಿಕಾರಿಗಳಿಗೆ ಒಟ್ಟು 152 ಕೋಟಿ ರೂ. ನೀಡಲಾಗಿದೆ. ವಿಪತ್ತು ಪರಿಹಾರ ನಿಧಿಯಲ್ಲಿ ಬಿಬಿಎಂಪಿಗೆ 50 ಕೋಟಿ ರೂ.ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಜಮೀನು ಮಂಜೂರು: ಜಿಲ್ಲೆಯ ವಿವಿಧ ಯೋಜನೆಗಳಿಗೆ ಸರ್ಕಾರ 27 ಎಕರೆ ಜಮೀನು ಮಂಜೂರು ಮಾಡಿದೆ, ಮಾಗಡಿಯ ಅಂಬೇಡ್ಕರ್ ವಸತಿ ಶಾಲೆಗೆ 8 ಎಕರೆ, ಆಶ್ರಯ ಯೋಜನೆಗೆ 6 ಎಕರೆ, ಬಿಡದಿ, ರಾಮನಗರ ಮತ್ತು ಚನ್ನಪಟ್ಟಣದ ಘನ ತಾಜ್ಯ ವಿಲೇವಾರಿಗೆ ಮೂರು ಭಾಗ ಗಳಲ್ಲಿ ಒಟ್ಟು 7 ಎಕರೆ ಹಾಗೂ ಕೃಷಿ ಸಹಕಾರ ಪರಿಷತ್‌ಗೆ 15 ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಮನೆ ನಿರ್ಮಿಸಿಕೊಳ್ಳಿ: ಕಳೆದ ವರ್ಷ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಕ್ರಮವಾಗಿ 5 ಮತ್ತು 3 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಇದಕ್ಕಾಗಿ ಹಣ ನೀಡಿದೆ. ಆದರೆ ಬಹುತೇಕ ತೊಂದರೆಗೊಳಗಾದವರು ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದಾಗಿ ಅವರ ಖಾತೆಗೆ ಸೇರಬೇಕಾದ ಹಣ ಇನ್ನೂ ಜಮಾ ಆಗಿಲ್ಲ. ದಯಮಾಡಿ ಫಲಾನುಭವಿಗಳು ಮನೆ ನಿರ್ಮಿಸಿಕೊಂಡರೆ ಅಂತಹವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ ಎಂದು ಅಶೋಕ್ ತಿಳಿಸಿದರು.
ಬದಲಿ ಜಮೀನು ನೀಡಲು ಚಿಂತನೆ: ರಾಜ್ಯದಲ್ಲಿ ಕಂದಾಯ ಇಲಾಖೆ ಮಂಜೂರು ಮಾಡಿರುವ ಜಮೀನುಗಳು ತಮ್ಮದೆಂದು ಅರಣ್ಯ ಇಲಾಖೆ ಹೇಳಿರುವ ಹಲವಾರು ಪ್ರಕರಣಗಳಿದ್ದು, ಈ ಸಂಬಂಧ ಎರಡೂ ಇಲಾಖೆಗಳೊಂದಿಗೆ ಕೂಡಲೇ ಸಭೆಯನ್ನು ನಡೆಸಿ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ವ್ಯವಸ್ಥೆಯನ್ನು ಮಾಡಿ ಈಗಾಗಲೇ ಮಂಜೂರಾಗಿರುವ ಭೂಮಿಯನ್ನು ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಅಲ್ಲದೆ, ಕಪಾಲ ಬೆಟ್ಟದಲ್ಲಿ ಗೋಮಾಳದ ಜಮೀನನ್ನು ಕಾನೂನು ಮೀರಿ ಮಂಜೂರು ಮಾಡಿಕೊಟ್ಟಿದ್ದರೆ ಅದನ್ನು ರದ್ದುಪಡಿಸಲಾಗುವುದು, ಎಲ್ಲವನ್ನೂ ನಿಯಮ ಬದ್ಧವಾಗಿ ಮಾಡಿದ್ದರೆ ಮಂಜೂರಾತಿ ಮುಂದುವರಿಸಲಾಗುವುದು ಎಂದು ಅಶೋಕ್ ಮಾಹಿತಿ ನೀಡಿದರು.
ಚಂಡಮಾರುತದಿಂದ ಸದ್ಯಕ್ಕೆ ಅಪಾಯವಿಲ್ಲ: ನಿಸರ್ಗ ಚಂಡ ಮಾರುತದಿಂದ ರಾಜ್ಯಕ್ಕೆ ಸದ್ಯ ಅಪಾಯವಿಲ್ಲ. ಮಹಾರಾಷ್ಟ್ರಕ್ಕೆ 100-120 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆಯಾದರೂ ರಾಜ್ಯದಲ್ಲಿ ಇದರ ವೇಗ 60-70 ಕಿ.ಮೀ. ಮಾತ್ರ ಇರಲಿದೆ. ರಾಜ್ಯದ ಕರಾವಳಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಇದರಿಂದ ಸಾಧಾರಣ ಮಳೆಯಾಗಲಿದೆ. ಸಮುದ್ರದ ಅಲೆಗಳು 2-3 ಮೀಟರ್ ಎತ್ತರ ಇರುವುದರಿಂದ ಮೀನುಗಾರಿಕೆ ತೆರಳದಂತೆ ಸೂಚನೆ ನೀಡಲಾಗಿದೆ. ಇದರ ಹೊರತಾಗಿಯೂ ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಅಶೋಕ್ ತಿಳಿಸಿದರು.