ಆಸ್ತಿತೆರಿಗೆ ಪಾವತಿಗೆ ಜು.31 ಕಡೇ ದಿನ: ಗಡುವು ವಿಸ್ತರಣೆ ಇಲ್ಲವೆಂದ ಬಿಬಿಎಂಪಿ

Vijayavani-Featured-Image
Published on

ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಸ್ವತ್ತುದಾರರು ತನ್ನ ವಾರ್ಷಿಕ ಆಸ್ತಿತೆರಿಗೆ ಪಾವತಿಸಲು ಬುಧವಾರ (ಜು.31) ಕಡೆಯ ದಿನವಾಗಿದ್ದು, ಗಡುವು ವಿಸ್ತರಿಸುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಪ್ರತೀ ವರ್ಷ ಹೆಚ್ಚುವರಿ ಸಮಯದೊಂದಿಗೆ ಶೇ.5 ರಿಯಾಯಿತಿ ಸಹಿತ ಮೇ ತಿಂಗಳಾಂತ್ಯದವರೆಗೆ ಆಸ್ತಿತೆರಿಗೆ ಪಾವತಿಸಲು ಅವಕಾಶ ನೀಡಲಾಗುತ್ತಿತ್ತು. ಈ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಲೆಕ್ಷನ್ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಗಡುವನ್ನು ಜು.31ರವರೆಗೆ ವಿಸ್ತರಿಸಲಾಗಿತ್ತು. ಜತೆಗೆ ಹಿಂದಿನ 5 ವರ್ಷದ ಅವಧಿಯ ಹಿಂಬಾಕಿ ಮೊತ್ತವನ್ನು ದಂಡ ಇಲ್ಲದೆ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ಹೆಚ್ಚಿನ ಆದಾಯ ಸಂಗ್ರಹಿಸುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ.

ಪ್ರಸ್ತುತ ಪಾಲಿಕೆಯಿಂದ ದೊಡ್ಡ ಮೊತ್ತವನ್ನು ಉಳಿಸಿಕೊಂಡಿರುವ ಸ್ವತ್ತುದಾರರಿಗೆ ನೋಟಿಸ್ ನೀಡಿ ತೆರಿಗೆ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿಗೆ ಜಿ.ಟಿ.ಮಾಲ್ ಎರಡು ವರ್ಷದ ಬಾಕಿ ಮೊತ್ತ 3.56 ಕೋಟಿ ರೂ. ಪಾವತಿಸದ ಕಾರಣ ಅಧಿಕಾರಿಗಳು ಬೀಗ ಹಾಕಿದ್ದರು. ಇದಾಗಿ ಮೂರೇ ದಿನಗಳಲ್ಲಿ ಬಾಕಿ ಪಾವತಿಸಿದ ಮಾಲ್ ಎಂದಿನಂತೆ ಕಾರ್ಯನಿರ್ವಹಿಸಿತ್ತು. ಇದೇ ರೀತಿ ಹಲವು ವಾಣಿಜ್ಯ ಮಳಿಗೆಗೂ ಪಾಲಿಕೆ ಬೀಗ ಹಾಕಿ ಎಚ್ಚರಿಕೆ ಸಂದೇಶ ರವಾನಿಸಿತ್ತು.

ಈ ವರ್ಷ ಪಾಲಿಕೆ ಬಾಕಿ ಸೇರಿ ಒಟ್ಟು 5,200 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಈವರೆಗೆ ಅರ್ಧದಷ್ಟು ಮೊತ್ತ ವಸೂಲಾಗಿದೆ. ಮಹದೇವಪುರ ಹಾಗೂ ಪೂರ್ವ ವಲಯದಿಂದ ಹೆಚ್ಚಿನ ಆದಾಯ ಕ್ರೊಡೀಕರಣವಾಗಿದೆ. ಆದರೆ, ದಾಸರಹಳ್ಳಿ, ಯಲಹಂಕ ಹಾಗೂ ಆರ್.ಆರ್.ನಗರ ವಲಯದಲ್ಲಿ ನಿರೀಕ್ಷಿದಷ್ಟು ಗುರಿ ತಲುಪಿಲ್ಲ ಎಂದು ಹೇಳಲಾಗಿದೆ.

ಗಡುವು ವಿಸ್ತರಣೆ ಇಲ್ಲ:

2024-25ನೇ ಸಾಲಿನ ಆಸ್ತಿತೆರಿಗೆ ಪಾವತಿಗೆ ಜು.31 ಕೊನೆಯ ದಿನವಾಗಿದ್ದು, ಗಡುವು ವಿಸ್ತರಿಸದಿರಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ ಸಾಕಷ್ಟು ಸಮಯ ನೀಡಿರುವುದರಿಂದ ಮತ್ತೆ ಹೊಸದಾಗಿ ಗಡುವನ್ನು ಮುಂದುವರಿಸುವ ಪ್ರಸ್ತಾಪ ಇಲ್ಲ ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net