

ಮಂಗಳೂರು: ರಾಷ್ಟ್ರೀಯ ಲೋಕ ಅದಾಲತ್ ಜೂನ್ 25ರಂದು ಜರುಗಲಿದ್ದು, ಅದರಂತೆ ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲಾ ಮಟ್ಟದಲ್ಲಿಯೂ ಲೋಕ ಅದಾಲತ್ ಆಯೋಜಿಸಲಾಗಿದೆ. ಈ ವೇಳೆ ಕಾನೂನು ಅರಿವು, ನೆರವು ಮತ್ತು ರಾಜಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಎಂ.ಜೋಶಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 52,238 ಪ್ರಕರಣಗಳು ಬಾಕಿ ಉಳಿದಿದ್ದು, ಮೇ 26ರ ವರೆಗೆ 4,040 ಪ್ರಕರಣಗಳನ್ನು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಜಿಗಾಗಿ ಗುರುತಿಸಲಾಗಿದೆ. ಜೂನ್ 25ರ ವರೆಗೂ ಇಂತಹ ಪ್ರಕರಣಗಳನ್ನು ಗುರುತಿಸುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸುವುದರಿಂದ ಸೋಲು-ಗೆಲುವು ಎನ್ನವುದು ಬರುವುದಿಲ್ಲ. ಎರಡೂ ಕಡೆಯವರದ್ದೂ ಗೆಲುವು ಆಗಿರುತ್ತದೆ ಮತ್ತು ಸಮಯ, ಹಣಕಾಸಿನ ಉಳಿತಾಯವಾಗಿ, ಭಿನ್ನಾಭಿಪ್ರಾಯ ಇರುವವರು ಒಂದಾಗಿ ಹೊರಹೋಗುವ ವಾತಾವರಣ ನಿರ್ಮಾಣವಾಗುತ್ತದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರುಪಾವತಿಸಲಾಗುವುದು ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವೇತನ, ಗ್ರಾಹಕರ ವೇದಿಕೆ, ರಿಯಲ್‌ಎಸ್ಟೇಟ್ ಪ್ರಾಧಿಕಾರಿಕ್ಕೆ ಸಂಬಂಧಿಸಿದ, ಚೆಕ್ ಅಮಾನ್ಯ, ಮೋಟಾರು ವಾಹನ ಅಪಘಾತ ಪ್ರಕರಣ, ಕಾರ್ಮಿಕ ವಿವಾದ, ವಿದ್ಯುತ್-ನೀರಿನ ಶುಲ್ಕ, ಭೂ ಸ್ವಾಧೀನ , ವಿಚ್ಛೇದನೆ ಹೊರತುಪಡಿಸಿ, ವೈವಾಹಿಕ/ ಕುಟುಂಬ ನ್ಯಾಯಾಲಯದ ಪ್ರಕರಣಗಳು ಮೊದಲಾದವುಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಲಾಗುತ್ತದೆ. ನ್ಯಾಯಲಯ ಪೂರ್ವ ವ್ಯಾಜ್ಯ (ಪ್ರೀ ಲಿಟಿಗೇಶನ್ ಕೇಸ್)ಗಳನ್ನೂ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ರವೀಂದ್ರ ಜೋಷಿ ತಿಳಿಸಿದರು.
ಪೋಕ್ಸೋ- 1ರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ಪೃಥ್ವಿರಾಜ್ ವರ್ಣೇಕರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಮಧುಕರ್ ಭಾಗವತ್ ಉಪಸ್ಥಿತರಿದ್ದರು.