

ಮೈಸೂರು: ಹಲಸಿನ ಮಹತ್ವವನ್ನು ಜರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ದ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಜೂ.15, 16 ರಂದು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಹಲಸಿನ ಹಬ್ಬ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್,ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳು ಬರಲಿವೆ. ಚಿಕ್ಕನಾಯಕನಹಳ್ಳಿ, ನಾಗರಹೊಳೆ ಕಾಡು, ಕೊಳ್ಳೇಗಾಲ, ತಮಿಳುನಾಡಿನ ಪನ್ನರ್ತಿಯ ಗುಣಮಟ್ಟದ ಹಲಸಿನ ಹಣ್ಣುಗಳು ಮಾರಾಟಕ್ಕೆ ಬರಲಿವೆ. ತುಮಕೂರಿನ ಕೆಂಪು ಹಲಸು ತಿನ್ನಲು ಸಿಗಲಿದೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.
ತುಮಕೂರಿನ ಹಿರೇಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದವರು ವಿವಿಧ ರೀತಿಯ ಕೆಂಪು ಹಲಸಿನ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡುತ್ತಾರೆ.
ಶಂಕರ ಹಲಸು, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ,ಸರ್ವ ಋತು, ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಕರ್ನಾಟಕದ ಹೆಸರಾಂತ ಹಲಸಿನ ತಳಿ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ.
ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ರಾಜ್ಯದ ಮೊದಲ ಕೆಂಪು ಹಲಸಿನ ತಳಿ ಸಿದ್ದು ಹಲಸು ಗಿಡಗಳು ಮಾರಾಟಕ್ಕೆ ಬರುತ್ತಿವೆ. ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಹಲಸಿನ ಹಬ್ಬವನ್ನು ಜೂ.15 ರಂದು ಬೆಳಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಮೈಸೂರು ಪಶ್ಚಿಮ ಅಧ್ಯಕ್ಷ ಎಸ್.ಕೆ. ಸುಧೀಂದ್ರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 4ಕ್ಕೆ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಫರ್ಧೆ ಏರ್ಪಡಿಸಲಾಗಿದೆ. ಜೂ.16 ರಂದು ಬೆಳಗ್ಗೆ 10.30 ರಂದು 5 ರಿಂದ 12 ವಯಸ್ಸಿನ ಮಕ್ಕಳಿಗೆ ‘ನಾ ಕಂಡಂತೆ ಹಲಸು’ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ಹಲಸಿನ ಅಡುಗೆ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುವುದು. ಮಾಹಿತಿಗೆ ಮೊ: 9880908608 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.