ಭತ್ತದ ಬೆಳೆಯಲ್ಲಿ ಜಿಗಿ ಹುಳು ಬಾಧೆ

jigi hulu
Published on

ಹಾನಗಲ್ಲ : ತಾಲೂಕಿನ ವರದಾ ನದಿ ಪಾತ್ರದಲ್ಲಿ ಹಾಗೂ ಧರ್ವ ಕಾಲುವೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ನಾಟಿ ಮಾಡಿದ ಭತ್ತದ ಬೆಳೆಯಲ್ಲಿ ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. ಇದು ತಾಲೂಕಿನಾದ್ಯಂತ ವ್ಯಾಪಿಸುವ ಸಾಧ್ಯತೆಯಿದ್ದು, ತಕ್ಷಣ ರೈತರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಸಂಗಮೇಶ ಸಲಹೆ ನೀಡಿದ್ದಾರೆ.

ಜಿಗಿಹುಳು ಅತಿ ಕಡಿಮೆ ಅವಧಿಯಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಉತ್ಪತ್ತಿಯಾಗಿ ಭತ್ತದ ಬೆಳೆಯ ರಸಹೀರಿ ಸಂಪೂರ್ಣವಾಗಿ ನಾಶ ಮಾಡುತ್ತದೆ. ಸಸ್ಯದ ಬುಡ ಭಾಗದಲ್ಲಿ ಜಿಗಿಹುಳು ರಸಹೀರುವುದರಿಂದ ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗಿದಂತಾಗಿ ಭತ್ತದ ಜಮೀನಿನಲ್ಲಿ ಅಲ್ಲಲ್ಲಿ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತೆ ಕಾಣುತ್ತದೆ. ಇದನ್ನು ಜಿಗಿಸುಡು ಅಥವಾ ಹಾಪರ್ ಬರ್ನ್ ಎನ್ನುತ್ತಾರೆ. ದಿನಕಳೆದಂತೆ ಮರಿಹುಳುಗಳಿಗೆ ರೆಕ್ಕೆಗಳು ಬಂದು ಪಕ್ಕದ ಜಮೀನುಗಳಿಗೆ ಜಿಗಿದು ಆ ಬೆಳೆಯನ್ನೂ ನಾಶಪಡಿಸುತ್ತವೆ.

ಹತೋಟಿ ಕ್ರಮಗಳು

ಜಿಗಿಹಳುವಿನ ಹತೋಟಿಗಾಗಿ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ 0.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಬುಪ್ರೋಫೆಜಿನ್ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಅಥವಾ ಥಯೋಮೆಥಾಗ್ಸಾಮ್ 25 ಡಬ್ಲ್ಯುಜಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಅಥವಾ ಟ್ರೆ್ತ್ರಪ್ಲೂಮೇಜಫೈರಿನ್ 0.5 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಅಥವಾ ಪ್ಲೋನಿಕಾಮಿಡ್ 0.3 ಗ್ರಾಂ ಬೆರೆಸಿ ಭತ್ತದ ಬುಡ ಭಾಗ ಚೆನ್ನಾಗಿ ನೆನೆಯುವಂತೆ ಸಿಂಪಡಿಸಬೇಕು.

ನಿರ್ವಹಣೆ ಕ್ರಮಗಳು

ಸಿಂಪರಣೆ ಮಾಡುವಾಗ ಗದ್ದೆಯಲ್ಲಿ ನೀರನ್ನು ಸಂಪೂರ್ಣವಾಗಿ ಬಸಿದು ಹಾಕಬೇಕು. ಗದ್ದೆಯಿಂದ ಗದ್ದೆಗೆ ನೀರು ಹಾಯಿಸಬಾರದು ಮತ್ತು ಯೂರಿಯಾ ರಸಗೊಬ್ಬರ ಬಳಸಬಾರದು. ಯಾವುದೇ ಕಾರಣಕ್ಕೂ ಬಾಧೆಗೊಳಗಾದ ಭತ್ತದ ಬೆಳೆಗೆ ಮೀಥೈಲ್ ಪ್ಯಾರಾಥಿಯಾನ್ ಅಥವಾ ಸಿಂಥಟಿಕ್ ಪೈರಾತ್ರಾಯಿಡ್ ರಾಸಾಯನಿಕಗಳನ್ನು ಬಳಸಬಾರದು. ಪ್ರತಿ 8 ಸಾಲಿಗೆ (7 ರಿಂದ 9 ಅಡಿ) ಪೂರ್ವ-ಪಶ್ಚಿಮವಾಗಿ ಪಾತಿ ಮಾಡಿ ಗಾಳಿಯಾಡುವಿಕೆ ಉತ್ತಮಗೊಳಿಸಿ ಗಿಡದ ಬುಡಕ್ಕೆ ಸಿಂಪರಣೆ ಮಾಡಬೇಕು. ಗ್ರಾಮದ ರೈತರು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಅನುಸರಿಸುವುದರಿಂದ ಹುಳುವಿನ ನಿಯಂತ್ರಣವಾಗಲಿದೆ.

ಹವಾಮಾನದ ವೈಪರೀತ್ಯದಿಂದಾಗಿ ತಾಲೂಕಿನಲ್ಲಿ ಭತ್ತದ ಬೆಳೆಗೆ ಜಿಗಿಹುಳು ಬಾಧೆ ಆರಂಭವಾಗಿದ್ದು, ರೈತರು ಪ್ರತಿದಿನ ಬೆಳೆ ವೀಕ್ಷಣೆ ಜತೆಗೆ, ಹುಳುಗಳ ಬಾಧೆ ಕಂಡು ಬಂದಲ್ಲಿ ತಕ್ಷಣ ಹತೋಟಿ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net