ಮಹಡಿಯಿಂದ ಜಿಗಿದು ಅಸುನೀಗಿದ

Published on

ಕೋಲಾರ: ಕೌಟುಂಬಿಕ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿ ಕೋಲಾರದ ತನ್ನ ಚಿಕ್ಕಮ್ಮನ ಮನೆಯಲ್ಲಿ ಅಡಗಿದ್ದ ಪತಿ ಬಂಧನ ಭೀತಿಯಿಂದ ಟೆರೆಸ್​ನಿಂದ ಜಿಗಿದು ಮೃತಪಟ್ಟಿದ್ದಾನೆ.

ಬೆಂಗಳೂರಿನ ಸಿದ್ದಾಪುರದ ಸೋಮೇಶ್ವರನಗರ ನಿವಾಸಿ ತಬ್ರೇಜ್​ ಪಾಷಾ (37) ಮೃತ ಆರೋಪಿ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಆ.2ರಂದು ಚಾಮರಾಜಪೇಟೆಯ ತವರು ಮನೆಯಲ್ಲಿದ್ದ ಸೈಯಿದಾ ಫಾಜೀಯಾ ಫಾತೀಮಾ (34) ಎಂಬಾಕೆಯನ್ನು ತಬ್ರೇಜ್​ ಪಾಷಾ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಚಾಮರಾಜಪೇಟೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಬಲೆಬೀಸಿದ್ದರು. ಕೋಲಾರದ ಹೊರವಲಯದಲ್ಲಿರುವ ದರ್ಗಾದಲ್ಲಿ ತಬ್ರೇಜ್​ ಅಡಗಿರುವ ಖಚಿತ ಮಾಹಿತಿ ಪಡೆದ ಬಂಧಿಸಲು ಹೋಗಿದ್ದರು. ಪೊಲೀಸರು ಹೋಗುವಷ್ಟರಲ್ಲಿ ಸಮೀಪದ ಆತನ ಚಿಕ್ಕಮ್ಮನ ಮನೆಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು. ಈ ಮಾಹಿತಿ ಮೇರೆಗೆ ಪೊಲೀಸರು, ಮನೆಯ ಹುಡುಕಾಟ ನಡೆಸಿಕೊಂಡು ಹೋಗುತ್ತಿದ್ದರು. ಇದನ್ನು ತಿಳಿದ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಮನೆಯ ಟೆರೆಸ್​ ಮೇಲೆ ಏರಿ 12 ಅಡಿ ಎತ್ತರದಿಂದ ಜಿಗಿದು ಅಸ್ವಸ್ಥಗೊಂಡಿದ್ದ. ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಡಿಯೋ ಮಾಡಿದ ತಬ್ರೇಜ್:​ ಈ ನಡುವೆ ತಬ್ರೇಜ್​ ಪಾಷಾ, 7 ನಿಮಿಷಗಳ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಸೈಯಿದಾ ಫಾಜೀಯಾ ಫಾತೀಮಾಳನ್ನು ಪ್ರೀತಿಸಿ ಮದುವೆಯಾಗಿದ್ದೆ. ಅದಕ್ಕೆ ನಮ್ಮತಂದೆ ವಿರೋಧ ಇತ್ತು. ಆದರೂ ಒಪ್ಪಿಸಿ ಮದುವೆ ಮಾಡಿಕೊಂಡೆ. ಆದರೆ, ಪತ್ನಿ ಮತ್ತು ಆಕೆಯ ಮನೆಯವರು ನನಗೆ ಅವಮಾನ ಮಾಡಿದರು. ಪತ್ನಿ ಕೂಡ ನನ್ನ ಬಿಟ್ಟು ತವರು ಮನೆ ಸೇರಿದಳು. ಪತ್ನಿಗೆ ವಾಪಸ್​ ಬರುವಂತೆ ಕೇಳಿಕೊಂಡೆ. ಒಪ್ಪಲಿಲ್ಲ. ನನ್ನ ಬಳಿಯಿದ್ದ ಆಭರಣ ತೆಗೆದುಕೊಂಡು ಹೋಗಿದ್ದಳು. ನಾನು ಮಾಡುತ್ತಿರುವುದು ತಪ್ಪು ಎಂಬುದು ಗೊತ್ತು. ಬದುಕಲು ನನಗೂ ಇಷ್ಟವಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ ತಬ್ರೇಜ್​, ಸಾವಿಗೂ ಮೊದಲು ಈ ವಿಡಿಯೋ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್​ರು ಬಂಧನಕ್ಕೆ ಹೋಗಿರಲಿಲ್ಲ?

ಆರೋಪಿಯನ್ನು ಬಂಧಿಸಲು ಚಾಮರಾಜಪೇಟೆ ಪೊಲೀಸ್​ ಅಥವಾ ಜಿಲ್ಲೆಯ ಪೊಲೀಸರ್ಯಾರು ಹೋಗಿರಲಿಲ್ಲ. ಪೊಲೀಸರ ವಾಹನ ಇರಬಹುದು ಎಂದು ಅನುಮಾನಗೊಂಡು ಜಿಗಿದು ಆರೋಪಿ ಮೃತಪಟ್ಟಿದ್ದಾನೆ. ಮೃತಪಟ್ಟ ಬಳಿಕ ಚಾಮರಾಜಪೇಟೆ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದೆ. ಅನುಮಾನಾಸ್ಪದ ಸಾವು ಎಂದು ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net