

ತುಮಕೂರು: ಕಳೆದ ತಿಂಗಳು ಗಂಗಾಂಜನೇಯ ರಾಜೀನಾಮೆಯಿಂದ ತೆರವಾಗಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜು.9 ರಂದು ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ.
ಜೂ.4ರಂದು ಅಧಿಕಾರ ಹಂಚಿಕೆ ಸೂತ್ರಕ್ಕೆ ಕಟ್ಟು ಬಿದ್ದು, ಅಧ್ಯಕ್ಷ ಗಂಗಾಂಜನೇಯ ರಾಜೀನಾಮೆ ನೀಡಿದ್ದರು. ವಾರದ ಬಳಿಕ ರಾಜೀನಾಮೆ ಅಂಗೀಕಾರಗೊಂಡಿತ್ತು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ತುಮಕೂರು ಉಪವಿಭಾಗಾಧಿಕಾರಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
9ರಂದು ಚುನಾವಣೆ: ಜು.9ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 11 ರಿಂದ 12ರವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿ ಮಾಡಲಾಗಿದೆ. ಮಧ್ಯಾಹ್ನ 2ಕ್ಕೆ ಸಭೆ ಆರಂಭವಾಗಲಿದೆ. 2 ರಿಂದ 2.15ರವರೆಗೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ ಇರಲಿದೆ. 2.30ರ ನಂತರ ಅವಶ್ಯವಿದ್ದಲ್ಲಿ ಚುನಾವಣೆ ನಡೆಸಿ, ಫಲಿತಾಂಶ ಘೋಷಣೆ ಮಾಡಲಾಗುವುದು.
30 ಸದಸ್ಯ ಬಲವುಳ್ಳ ತಾಪಂನಲ್ಲಿ 17 ಸ್ಥಾನ ಹೊಂದಿರುವ ಬಿಜೆಪಿ ಸ್ಪಷ್ಟಬಹುಮತ ಹೊಂದಿದೆ.
ಜೆಡಿಎಸ್-12 ಹಾಗೂ ಕಾಂಗ್ರೆಸ್-01 ಸ್ಥಾನ ಗಳಿಸಿವೆ. ಹಾಗಾಗಿ, ಉಳಿದ ಅವಧಿಗೆ ಬಿಜೆಪಿಯ ಅರಕೆರೆ ಕ್ಷೇತ್ರದ ಎನ್.ಇ.ಕವಿತಾ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಕವಿತಾ ಬೆಂಬಲಕ್ಕೆ ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ ನಿಂತಿದ್ದು, ಇತ್ತೀಚೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡ ಕೃಪಾಶೀರ್ವಾದ ಸಹ ಇದೆ. ಹಾಗಾಗಿ, ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿರುವ ಕುರುವೇಲು ಕ್ಷೇತ್ರದ ಬಿಜೆಪಿ ಸದಸ್ಯೆ ಸುಧಾ ಆಸೆ ಬಹುತೇಕ ಕಮರಿದೆ. ಆದರೂ ಅಧ್ಯಕ್ಷ ಹುದ್ದೆಗೇರಲು ಸುಧಾ ಲಾಬಿ ನಡೆಸಿದ್ದಾರೆ. ಬಿಜೆಪಿ ಭಿನ್ನಮತದ ಲಾಭ ಪಡೆದು ‘ಆಪರೇಷನ್’ ಅಸ್ತ್ರ ಬಳಸಲು ಜೆಡಿಎಸ್ ಸಿದ್ಧತೆ ನಡೆಸಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಕೈಬಿಟ್ಟಿರುವುದು ಬಿಜೆಪಿ ಹಾದಿ ಸುಗಮವಾಗಿಸಿದೆ.
ಗಂಗಾಂಜನೇಯಗೆ ಬೀಳ್ಕೊಡುಗೆ?: ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ್’ಪ್ರಶಸ್ತಿಗೆ ತುಮಕೂರು ತಾಲೂಕು ಪಂಚಾಯಿತಿ ಭಾಜನವಾಗಿದ್ದು, ಗಂಗಾಂಜನೇಯ ಅವಧಿಯಲ್ಲಿ ಈ ಪುರಸ್ಕಾರ ಬಂದ ಹಿನ್ನೆಲೆಯಲ್ಲಿ ಅಭಿನಂದನಾ ಹಾಗೂ ಮಾಜಿ ಅಧ್ಯಕ್ಷರಿಗೆ ಪರೋಕ್ಷವಾಗಿ ಬೀಳ್ಕೊಡುಗೆ ಸಮಾರಂಭವನ್ನು ಶುಕ್ರವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರೊನಾ ಭೀತಿ ನಡುವೆಯೂ ಸಭೆ ನಡೆಸಿರುವುದು ಈಗ ಚರ್ಚೆಗೆ ಗ್ರಾಸ ಒದಗಿಸಿದೆ. ಜತೆಗೆ ಅಧ್ಯಕ್ಷ ಚುನಾವಣೆ ವೇಳೆ ಸದಸ್ಯರಿಗೆ ಒಬ್ಬಟ್ಟಿನ ಊಟ ಕೂಡ ಹಾಕಿಸಿರುವುದು ‘ಆಮಿಷ’ ಒಡ್ಡಿದಂತಾಗಿದೆ.
ಕರೊನಾ ಸಂದರ್ಭದಲ್ಲಿ ಸಭೆಗಳನ್ನು ಮಾಡುವಂತಿಲ್ಲ. ತಾಪಂನಲ್ಲಿ ಈ ರೀತಿ ಸಭೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ತಾಪಂ ಅಧ್ಯಕ್ಷ ಸ್ಥಾನ ಚುನಾವಣೆಗೆ ಮಾದರಿ ಚುನಾವಣಾ ಸಂಹಿತೆ ಇಲ್ಲ. ಆದರೆ, ಸದಸ್ಯರಿಗೆ ಯಾವುದೇ ರೀತಿಯ ಆಮಿಷ ಒಡ್ಡಿರುವುದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು. ವಿ.ಅಜಯ್ ಉಪವಿಭಾಗಾಧಿಕಾರಿ