

ಹಾನಗಲ್ಲ: ರಾಜ್ಯದಲ್ಲಿ ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆ ಜಾರಿಗೊಂಡಿದ್ದು, ವಿಮಾ ಕಂತು ಪಾವತಿಸಲು ಜು. 31 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.
ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪ್ರಸ್ತುತ ಮುಂಗಾರು ಹಂಗಾಮಿಗೆ ಹಸಿಮೆಣಸಿನಕಾಯಿ, ಅಡಕೆ, ಶುಂಠಿ ಮತ್ತು ಮಾವು ಬೆಳೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ರೈತರು ಪ್ರತಿ ಹೆಕ್ಟೇರ್ಗೆ ಅಡಕೆಗೆ (6400 ರೂ.), ಹಸಿಮೆಣಸಿನಕಾಯಿ (3550 ರೂ.), ಶುಂಠಿ (6500 ರೂ.), ಮಾವು (4000 ರೂ.) ಕಂತು ಪಾವತಿಸಬೇಕಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಸಾಲ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ತಾಲೂಕಿನ ಎಲ್ಲ ರೈತರು ಬೆಳೆ ವಿಮಾ ಯೋಜನೆಯ ಲಾಭ ಪಡೆಯಬೇಕು. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮಾ ಅರ್ಜಿಯೊಂದಿಗೆ ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್ಬುಕ್, ಕಂದಾಯ ರಸೀದಿ, ಆಧಾರ ಸಂಖ್ಯೆಯ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರು ಬ್ಯಾಂಕ್ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು, ಸ್ಥಳೀಯ ಪ್ರಾಂತೀಯ ಗ್ರಾಮೀಣ ಬ್ಯಾಂಕ್ಗಳಲ್ಲಿ ಹಣ ಪಾವತಿಸಿ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿಮಾ ಕಂತು ಪಾವತಿಸಿದ ರೈತರು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ಅಥವಾ ಗ್ರಾಮ ಆಡಳಿತಾಧಿಕಾರಿ ಅಧೀನ ಪಿ.ಆರ್. ಮೂಲಕ ನಿಗದಿತ ಅವಧಿಯೊಳಗಾಗಿ ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಮಂಜುನಾಥ ಬಣಕಾರ ತಿಳಿಸಿದ್ದಾರೆ.