ಅಮೆರಿಕದಲ್ಲಿ ಜುಲೈ 27 'ಯಕ್ಷಗಾನ ಡೇ' ಘೋಷಣೆ

UDP-4-7-Putthige
ಅಮೆರಿಕದಲ್ಲಿ 'ದೇವೀ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿದ ತಂಡಕ್ಕೆ "ಯಕ್ಷಗಾನ ಫೌಂಡೇಷನ್​ ಡೇ' ಘೋಷಣಾ ಪತ್ರ ನೀಡಲಾಯಿತು. ಎಂ.ಎಲ್​. ಸಾಮಗ, ಪಟ್ಲ ಸತೀಶ್​ ಶೆಟ್ಟಿ, ಅರ್ಚಕ ಕಿರಣ್​ ಭಟ್​, ಅರ್ಚನಾ ಭಟ್​, ಉದಯ ಕಲ್ಲೂರಾಯ ಇತರರಿದ್ದರು.
Published on

ಸಾಗರದಾಚೆಗೂ ಛಾಪು ಮೂಡಿಸಿದ ಕರಾವಳಿಯ ಹೆಮ್ಮೆಯ ಕಲೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಪಟ್ಲ ಸತೀಶ್​ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಧ್ರುವ ಫೌಂಡೇಷನ್​ನ ಕಲಾವಿದರು ಅಮೆರಿಕದ ಫೀನಿಕ್ಸ್​ನಲ್ಲಿರುವ ಶ್ರೀಮಠದ ಮೊದಲ ಮಂದಿರ ಶ್ರೀವೆಂಕಟ ಕೃಷ್ಣ ಕ್ಷೇತ್ರದಲ್ಲಿ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದರು.

ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಟೆಂಪೆ ಅರಿಝೊನಾ ಸಿಟಿ ಮೇಯರ್​ ಕೋರಿ ಡಿ. ವುಡ್ಸ್​ ಅವರು ಯಕ್ಷಗಾನದ ವೇಷಭೂಷಣ, ಚಂಡೆ ವಾದನ, ವಿಶಿಷ್ಟ ಕುಣಿತ ಮತ್ತು ಅಪೂರ್ವ ಗಾಯನ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಯಕ್ಷಗಾನ ಕಲೆ ಆಸ್ವಾದಿಸಿ, ಪ್ರದರ್ಶನ ನೀಡಿದ ದಿನವನ್ನೇ (ಜುಲೈ 27) ಪ್ರತಿವರ್ಷ ಯಕ್ಷಗಾನ ಫೌಂಡೇಷನ್​ ಡೇ ಎಂದು ಘೋಷಿಸಿ, ಪ್ರಮಾಣ ಪತ್ರ ನೀಡಿದರು.

ಪಟ್ಲ ಸತೀಶ್​ ಶೆಟ್ಟಿ ಮಾತನಾಡಿ, ಭಾರತೀಯ ಸಾಂಪ್ರದಾಯಿಕ ಹಾಗೂ ಪ್ರಾಚೀನ ಯಕ್ಷಗಾನ ಕಲೆಗೆ ಅಮೆರಿಕದಲ್ಲೂ ಹೊಳಪು ನೀಡುವಂತೆ ಮಾಡಿದ ಪುತ್ತಿಗೆ ಶ್ರೀಪಾದರಿಗೆ ಭಕ್ತಿ ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಯಕ್ಷಗಾನವನ್ನು ಬಾಲ್ಯದಲ್ಲಿಯೇ ಅಭ್ಯಸಿಸಿದ್ದ ಶ್ರೀಮಠದ ಪ್ರಧಾನ ಅರ್ಚಕ ಕಿರಣ್​ ಭಟ್​ ಅವರ ಪತ್ನಿ ಅರ್ಚನಾ, ಉದಯ ಕಲ್ಲೂರಾಯ ಮತ್ತಿತರ ಕಾರ್ಯಕರ್ತರು ಭಾಗವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಹೂಸ್ಟನ್​ನಲ್ಲಿ ಶಾಂಭವೀ ವಿಜಯ

ಅಮೆರಿಕದ ಟೆಕ್ಸಾಸ್​ ರಾಜ್ಯದ ಹೂಸ್ಟನ್​ ಮಹಾನಗರದಲ್ಲಿರುವ ಪುತ್ತಿಗೆ ಮಠದ ಮುಂಭಾಗದ ವಿಶಾಲ ಬಯಲಿನಲ್ಲಿ ನಿರ್ಮಿಸಿದ್ದ ಭವ್ಯ ರಂಗಮಂದಿರದಲ್ಲಿ ಆ.4ರಂದು 'ಶಾಂಭವೀ ವಿಜಯ' ಯಕ್ಷಗಾನ ಪ್ರದರ್ಶಿಸಲಾಯಿತು. ಅನಿವಾಸಿ ಭಾರತೀಯರೊಂದಿಗೆ ಅಮೆರಿಕದ ಪ್ರಜೆಗಳೂ ಸಹ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸದರು. ಪುತ್ತಿಗೆ ಶ್ರೀಗಳಿಂದ ನಮ್ಮ ಯಕ್ಷಗಾನ ಕಲೆಯು ಸಾಗರದಾಚೆಗೂ ತನ್ನ ಛಾಪು ಮೂಡಿಸಿದ್ದನ್ನು ಕಂಡು ನಿಜಕ್ಕೂ ಹೆಮ್ಮೆಯಾಯಿತು ಎಂದು ಹಿರಿಯ ಕಲಾವಿದ ಎಂ.ಎಲ್​. ಸಾಮಗ ತಿಳಿಸಿದ್ದಾರೆ.

ಅಮೆರಿಕದಲ್ಲಿ ಯಕ್ಷಗಾನ ಡೇ ಘೋಷಣೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಯಕ್ಷಧ್ರುವ ಫೌಂಡೇಷನ್​ನ ಕಲಾ ತಂಡವು ಅಮೆರಿಕದಾದ್ಯಂತ ಸಂಚರಿಸಿ, ಯಕ್ಷಗಾನ ಪ್ರದರ್ಶನ ನೀಡಲಿದೆ. ಪುತ್ತಿಗೆ ಮಠವಿರುವ ನ್ಯೂಜರ್ಸಿ, ಹುಸ್ಟೋನ್​ ಮುಂತಾದ ಶಾಖೆಗಳಲ್ಲಿ ಪ್ರದರ್ಶನ ನಡೆಯಲಿದೆ. | ಪ್ರಸನ್ನ ಆಚಾರ್ಯ. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net