

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅವ್ಯವಹಾರದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐ(ಎಂ)ನಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಆರ್ಥಿಕವಾಗಿ ದುರ್ಬಲರಾದ ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕಾದ ಅಭಿವೃದ್ಧಿ ಪ್ರಾಧಿಕಾರ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ದಲ್ಲಾಳಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.
ಇದು ಅಕ್ರಮಗಳನ್ನು ಸಕ್ರಮ ಮಾಡುವ ಪ್ರಾಧಿಕಾರವಾಗಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವೂ ಸೇರಿದಂತೆ ಈ ಹಿಂದೆ ನಡೆದಿರುವ ಎಲ್ಲ ಅಕ್ರಮಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಕ್ರಮವಾಗಿ ಹಂಚಿರುವ ನಿವೇಶನಗಳನ್ನು ವಾಪಸ್ ಪಡೆದು ಬಡವರಿಗೆ ಹಂಚಬೇಕು. ಹಲವು ವರ್ಷಗಳಿಂದ ಮುಡಾದಲ್ಲಿ ಇರುವ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಅವರ ಮೇಲಿರುವ ಅಕ್ರಮಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು ರೈತರಲ್ಲದವರು ರೈತರಿಂದ ಭೂಮಿ ಖರೀದಿಸಲು ಅವಕಾಶ ನೀಡಿರುವುದೂ ಈ ರೀತಿಯ ಹಗರಣಗಳಿಗೆ ಕಾರಣವಾಗಿ ಕೃಷಿಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೂ ಸ್ವಾಧೀನ ಮಸೂದೆ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮೈಸೂರಿನಲ್ಲಿ ಲಕ್ಷಾಂತರ ಜನರಿಗೆ ಸ್ವಂತ ಮನೆ ಇಲ್ಲ. ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೆಲವರು ಉಸಿರುಗಟ್ಟುವ ಸಣ್ಣ ಜಾಗದಲ್ಲಿ ಜೀವನ ಕಳೆಯುತ್ತಿದ್ದಾರೆ. ಹೀಗಿರುವಾಗ ಕಳೆದ 15-20 ವರ್ಷಗಳಿಂದ ಕನಿಷ್ಠ 20*30 ಅಳತೆಯ ನಿವೇಶನವಾದರೂ ಸಿಗಲಿ ಎಂದು ಸುಮಾರು 40,000ಕ್ಕೂ ಹೆಚ್ಚಿನ ಜನ ಅರ್ಜಿ ಹಾಕಿ ಕಾದು ಕುಳಿತಿದ್ದಾರೆ ಎಂದರು.
ಮುಡಾ ಬಲಾಢ್ಯರಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡುತ್ತ ಬಡವರ ವಿರೋಧಿಯಾಗಿದೆ. ಹೀಗಾಗಿ ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನ ನೀಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಜಯರಾಂ, ಲ.ಜಗನ್ನಾಥ್, ಎನ್.ವಿಜಯ್ ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ರಾಜೇಂದ್ರ, ಸದಸ್ಯರಾದ ಆರ್.ಸುಬ್ರಹ್ಮಣ್ಯ, ಕೃಷ್ಣಮೂರ್ತಿ, ಶಾಕುಂತಲಾ ಬಾಲಾಜಿರಾವ್, ಬಲರಾಂ, ಶ್ರೀಧರ್, ಎನ್.ಸುಬ್ರಹ್ಮಣ್ಯ, ಕಲಿಂ ಪಾಷಾ, ಈಶ್ವರ್, ವಿಜಯ್ ಕುಮಾರ್‌ಗೌಡ, ಶಿವಕುಮಾರ್, ಪುಟ್ಟಮಲ್ಲಯ್ಯ, ಸಿದ್ದಯ್ಯ, ರಾಘವೇಂದ್ರ, ನಾಗರಾಜ್, ಕುಮಾರ್, ಮೋನಿಷ್, ಯರಗಲ್, ಶ್ರೀಕಂಠ ಮೂರ್ತಿ ಇತರರು ಇದ್ದರು.