

ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಮಂಜೂರು ಮಾಡುವಂತೆ ಕಳೆದ 1141 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಸ್ಪಂದಿಸದೇ ಇರುವದರಿಂದ ನ್ಯಾಯಾಂಗ ಹೋರಾಟಕ್ಕೆ ಮುಂದಾಗುವ ಅನಿವಾರ್ಯತೆಯಿದೆಂದು ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ನೀಡಿ ಹೋರಾಟ ನಡೆಸಿದರೂ ಸ್ಪಂದನೆ ದೊರೆಯದೇ ಇರುವುದರಿಂದ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಇಲ್ಲಿವರಗೆ ನಡೆದಿರುವ ಹೋರಾಟ, ಹಿಂದುಳುವಿಕೆ, ಆರೋಗ್ಯ ಸಮಸ್ಯೆಗಳ ಸಮಗ್ರ ಮಾಹಿತಿ ಒದಗಿಸಿ ಏಮ್ಸ್ ಸ್ಥಾಪಿಸುವ ಅಗತ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಏನಾದರೂ ಫಲ ದೊರೆಯಲು ಸಾಧ್ಯವಿದೆ.
ಈಗಾಗಲೇ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಏಮ್ಸ್ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿರುವದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಸ್ತಾವನೆ ಕುರಿತಂತೆ ಅನೇಕ ಗೊಂದಲಗಳು, ವಿವಾದಗಳಿವೆ. ಹೋರಾಟ ಎಲ್ಲಾ ಸಂಘಟನೆಗಳು,ಸಂಘ ಸಂಸ್ಥೆಗಳನ್ನು ಒಳಗೊಂಡಿಲ್ಲ. ಅನೇಕ ಸಂಘಟನೆಗಳು ಪ್ರತ್ಯೇಕ ಹೋರಾಟ ನಡೆಸಿರುವ ನಿದರ್ಶನವೂ ಇದೆ. ದೇಶದ 26 ರಾಜ್ಯಗಳಲ್ಲಿ ಏಮ್ಸ್ ಸ್ಥಾಪಿಸಲಾಗಿದೆ. ಉಳಿದಡೆ ಸ್ಥಾಪಿಸು ಕುರಿತಾಗಿಯೂ ಮನವರಿಕೆ ಮಾಡಬೇಕಿದೆ. ಹೋರಾಟದ ಹೆಸರಿನಲ್ಲಿ ಶಾಂತಿಕದಡದಂತೆ ಎಚ್ಚರವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹುಸೇನ ಬಾಷಾ,ನರಸಿಂಹಲು ಪೋತಗಲ್, ರವಿ ಉಟ್ಕೂರು, ಈರಪ್ಪ ಗುಂಜಳ್ಳಿ, ಕೃಷ್ಣ ಗುಂಜಳ್ಳಿ ಇದ್ದರು.