

ಕಿಕ್ಕೇರಿ: ಅಪಘಾತ ಪ್ರಕರಣವೊಂದರ ಸಂಬಂಧ ದಸ್ತಗಿರಿಗೆ ತೆರಳಿದ್ದ ನ್ಯಾಯಾಲಯದ ಆದೇಶ ಜಾರಿ ಅಧಿಕಾರಿ ಅಮಿನ್ ಕೆ.ಆರ್.ಶಂಕರೇಗೌಡ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪಿಗೆ ಕೆ.ಆರ್. ಪೇಟೆ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಕಾಳೇನಹಳ್ಳಿ ಸಾಕಮ್ಮ ಆರೋಪಿ. ತಾಲೂಕಿನ ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ಗ್ರಾಮಕ್ಕೆ ಅಪಘಾತ ಪ್ರಕರಣವಪೊಂದರ ಸಂಬಂಧಪಟ್ಟಂತೆ ಆರೋಪಿ ಚಿಕ್ಕಈರೇಗೌಡ ಅವರ ನಿವಾಸಕ್ಕೆ ಸೆ.6 ರಂದು ಸಂಜೆ ಅರೆಸ್ಟ್ ವಾರೆಂಟ್‌ನೊಂದಿಗೆ ದಸ್ತಗಿರಿಗೆ ಹೋಗಿದ್ದಾಗ ಚಿಕ್ಕಈರೇಗೌಡನ ಪತ್ನಿ ಸಾಕಮ್ಮ ನನ್ನ ಗಂಡನನ್ನು ಬಂಧಿಸಬೇಡಿ ಎಂದು ಕಿರುಚಾಡಿ ಕರ್ತವ್ಯ ಅಡ್ಡಿ ಪಡಿಸಿದರು. ಅಲ್ಲದೆ ಏಕಾಏಕಿ ಮನೆಯಿಂದ ಖಾರದ ಪುಡಿ ತಂದು ಅಮಿನ್ ಕೆ.ಆರ್.ಶಂಕರೇಗೌಡ ಅವರಿಗೆ ಕಣ್ಣಿಗೆ ಎರಚಿದ್ದರು. ಈ ವೇಳೆ ಅಪಘಾತ ಪ್ರಕರಣ ಆರೋಪಿ ಚಿಕ್ಕಈರೇಗೌಡ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು.
ನಂತರ ಅಮಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೆ.7ರಂದು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿದ್ದ ಆರೋಪಿ ಸಾಕಮ್ಮನನ್ನು ಪತ್ತೆ ಹಚ್ಚಿ ಕೆ.ಆರ್.ಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶ ಸುಧೀರ್ ಅವರ ಮುಂದೆ ಹಾಜಪಡಿಸಿದರು. ನ್ಯಾಯಾಧೀಶರು ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.