

ಮಂಗಳೂರು: ನಗರ ಪೊಲೀಸರ ಬಲೆಗೆ ಬಿದ್ದಿರುವ ಬಹು ಕೋಟಿ ವಂಚಕ ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ವಂಚನೆಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲು ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನಷ್ಟೇ ವಿಚಾರಣೆ ನಡೆಯಬೇಕಾಗಿದೆ. ಮುಂಬೈ, ಚಿತ್ರದುರ್ಗ ಮೊದಲಾದ ಕಡೆ ರೋಶನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಲ್ಲಿನ ಪೊಲೀಸರು ಬಾಡಿ ವಾರಂಟ್ ಪಡೆದು ವಿಚಾರಣೆಗೆ ಕರೆದೊಯ್ಯಲಿದ್ದಾರೆ.
ಆರೋಪಿ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ. ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿರುತ್ತದೆ. ಆರೋಪಿ ಬಂಧನವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾದ ಕಡೆಗಳಲ್ಲಿ ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ. ಆತನಿಂದ ವಂಚನೆಗೊಳಗಾದ ಹಲವಾರು ಮಂದಿ ಪ್ರಕರಣ ದಾಖಲಿಸಿಲ್ಲ. ಬಂಧನವಾಗಿರುವ ಹಿನ್ನೆಲೆಯಲ್ಲಿ ಒಂದಷ್ಟು ಮಂದಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ವಂಚನೆಗೊಳಗಾದವರು ಇದ್ದರೆ ಇನ್ನೂ ದೂರು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
* ಜತೆಗಿದ್ದ ವಿದೇಶಿ ಮಹಿಳೆ ರಕ್ಷಣೆ: ರೋಶನ್ ಸಲ್ಡಾನ ಐಷಾರಾಮಿ ಬಂಗಲೆಯಲ್ಲಿ ಆತನ ಜತೆಗಿದ್ದ ಮಲೇಷಿಯಾದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಆಕೆಯ ಪಾಸ್ಪೋರ್ಟ್, ವಿಸಾ ಮೊದಾಲಾದ ದಾಖಲೆಗಳನ್ನು ಪರಿಶೀಲಿಸಿ, ವಿದೇಶಕ್ಕೆ ಕಳುಹಿಸಿ ಕೊಡಲು ಪೊಲೀಸರು ನಿರ್ಧರಿಸಿದ್ದಾರೆ.
ಆರೋಪಿ ಐಷಾರಾಮಿ ಜೀವನಕ್ಕಾಗಿ ಬಹುಕೋಟಿ ವಂಚನೆಯಲ್ಲಿ ತೊಡಗಿದ್ದ. ಈತ ವಿದೇಶಿ ಜೀವನ ಶೈಲಿ ನಡೆಸುತ್ತಿದ್ದ. ಯಾರಲ್ಲೂ ಹೆಚ್ಚು ಮಾತನಾಡುತ್ತಿರಲಿಲ್ಲ. ವಿದೇಶಿ ಮದ್ಯ, ವಿದೇಶಿ ಮಹಿಳೆಯರೇ ಆತನಿಗೆ ಸಾಥ್. ಏಳೆಂಟು ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದರೂ, ಹಲವು ಪ್ರಕರಣ ದಾಖಲಾಗಿದ್ದರೂ, ಯಾರಿಗೂ ಈತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಬಂಗಲೆಯಲ್ಲಿ ಅಡಗುದಾಣ ಮಾಡಿ ತಲೆಮರೆಸಿಕೊಂಡಿದ್ದರೂ ಆತನನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸ್ ಕಮೀಶನರ್ ಸುಧೀರ್ ರೆಡ್ಡಿ ತಂಡ ಯಶಸ್ವಿಯಾಗಿದ್ದಾರೆ,