

ದೊಡ್ಡಬಳ್ಳಾಪುರ: ಸಾಸಲು ಹೋಬಳಿಯ ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಾಸ್ತವ ಸ್ಥಿತಿ ವೀಕ್ಷಿಸಿ ಹೈಕೋರ್ಟ್‌ಗೆ ವರದಿ ನೀಡಲು ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಭೋಲಾ ಪಂಡಿತ್ ಭೇಟಿ ನೀಡಿ ಪರಿಶೀಲಿಸಿದರು.
ಬಿಬಿಎಂಪಿ ಕಸ ವಿಲೇವಾರಿ ಘಟಕ ಎಂಎಸ್‌ಜಿಪಿಗೆ ಭೇಟಿ ನೀಡಿ ಕಸ ವಿಗಂಡಣೆ, ಬಯಲಿನಲ್ಲಿ ಕಸದ ರಾಶಿ ಹಾಕಿರುವ ಸ್ಥಳ, ಕಸದ ರಾಶಿಯಿಂದ ಹೊರಬಹುವ ತ್ಯಾಜ್ಯ ನೀರು ಸಂಗ್ರಹ ಆಗುವ ಕುಂಟೆ, ಕಸವನ್ನು ಗೊಬ್ಬರವಾಗಿ ಪರಿರ್ವತಿಸುವ ಯಂತ್ರಗಳ ಕಾರ್ಯಾಚರಣೆ ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸುವ
ಸ್ಥಳಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು.
ಗ್ರಾಮಗಳಿಗೆ ಭೇಟಿ: ಕಸದ ರಾಶಿಯಿಂದ ಹೆಚ್ಚು ತೊಂದರೆಗೆ ಸಿಲುಕಿರುವ ತಣ್ಣೀರನಹಳ್ಳಿ, ಮೂಡಕಾಳೇನಹಳ್ಳಿಗೆ ಭೇಟಿ ನೀಡಿದ ನ್ಯಾಯಾಧೀಶರು, ಗ್ರಾಮದ ಮಹಿಳೆಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಕಸದ ರಾಶಿಯಿಂದ ಹೊರಬರುತಿರುವ ದುರ್ನಾತ, ಮಳೆಗಾಲದಲ್ಲಿ ಕಸದ ರಾಶಿಯಿಂದ ಹಳ್ಳದ ಮೂಲಕ ಹರಿದು ಬರುವ ತ್ಯಾಜ್ಯ ನೀರಿನ ಸಮಸ್ಯೆ, ಅಂತರ್ಜಲ ಕಲುಷಿತಗೊಂಡು ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವುದು, ಅನಾರೋಗ್ಯಕ್ಕೆ ತುತ್ತಾಗಿರುತ್ತಿರುವ ಬಗ್ಗೆ ಗ್ರಾಮದ ಮಹಿಳೆಯರು ನ್ಯಾಯಾಧೀಶರ
ಗಮನಕ್ಕೆ ತಂದರು.
ಸಮಸ್ಯೆ ಹೇಳಿಕೊಳ್ಳಲು ಬಿಡದ ಪೊಲೀಸರು
ನ್ಯಾಯಾಧೀಶರು ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಸ್ಥಳೀಯರನ್ನು ಕಸ ವಿಲೇವಾರಿ ಘಟಕಕ್ಕೆ ಪ್ರವೇಶ ನೀಡದೆ ಪೊಲೀಸರು ಗೇಟ್‌ನಲ್ಲಿಯೇ ತಡೆದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಲಿಂಗಯ್ಯ, ನಮ್ಮ ಸಮಸ್ಯೆಗಳನ್ನು ನ್ಯಾಯಾಧೀಶರ ಗಮನಕ್ಕೆ ತರಲು ನಮಗೂ ಅವಕಾಶ ನೀಡಬೇಕಿತ್ತು. ಆದರೆ, ಪೊಲೀಸರು ಹಾಗೂ ಕಸ ವಿಲೇವಾರಿ ಘಟಕದವರು ತಡೆಯುವ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶವನ್ನು ಕಸಿದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲುಗಟ್ಟಿ ನಿಂತ ಲಾರಿಗಳು
ನ್ಯಾಯಾಧೀಶರು ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದರಿಂದ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬುಕೊಂಡು ಬಂದಿದ್ದ ನೂರಾರು ಲಾರಿಗಳನ್ನು ಕಸ ವಿಲೇವಾರಿ ಘಟಕದ ಒಳಗೆ ಹೋಗದಂತೆ ತಡೆಯಲಾಗಿತ್ತು. ಹಾಗಾಗಿ ಕಸ ವಿಲೇವಾರಿ ಘಟಕಕ್ಕೆ ಹೋಗುವ ಗುಂಡ್ಲಹಳ್ಳಿ ಸಮೀಪದ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು.
ಪಿಐಎಲ್ ಸಲ್ಲಿಕೆ
ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆ ಕುರಿತು ಹೈಕೋರ್ಟ್‌ಗೆ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಶ್ರೀನಿವಾಸ್, ನ್ಯಾಯಾಧೀಶರ ಭೇಟಿ ಕುರಿತು ಮಾಹಿತಿ ನೀಡಿ, ಬಿಬಿಎಂಪಿ ಇಲ್ಲಿಗೆ ತಂದು ರಾಶಿ ಹಾಕುತ್ತಿರುವ ಕಸದಿಂದ ಜನ, ಜಾನುವಾರು ಹಾಗೂ ಪರಿಸರಕ್ಕೆ ಆಗುತ್ತಿರುವ ತೊಂದರೆ ಕುರಿತು ದೂರು ಸಲ್ಲಿಸಲಾಗಿದೆ. ಇದರ ಸತ್ಯಾಸತ್ಯತೆ ಅರಿಯಲು ಹೈಕೋರ್ಟ್ ಸೂಚನೆಯಂತೆ ನ್ಯಾಯಾಧೀಶರು ಭೇಟಿ ನೀಡಿದ್ದಾರೆ. ನ್ಯಾಯಾಧೀಶರು ಗ್ರಾಮಗಳಿಗೆ ಭೇಟಿ ನೀಡಿದ್ದ ಸಮಯದಲ್ಲೂ ಕಸದ ರಾಶಿಯಿಂದ ತಾವು ಅನುಭವಿಸುತ್ತಿರುವ ತೊಂದರೆ ಬಗ್ಗೆ ಜನರು ಸಾಕಷ್ಟು ಮಾಹಿತಿ ನೀಡಿದ್ದಾರೆ ಎಂದರು.