ಮಾನಸಿಕ ಅಸ್ವಸ್ಥನಮೇಲೆ ನ್ಯಾಯಾಧೀಶರ ‘ಕರುಣೆ’

BKL JUDGE
Published on

ಭಟ್ಕಳ: ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಅಂದರೆ ಮೂಗು ಮುರಿಯುವವರೇ ಹೆಚ್ಚು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎನ್ನುವವರ ಸಂಖ್ಯೆ ತುಂಬಾ ವಿರಳ. ಆದರೆ, ಭಟ್ಕಳದ ನ್ಯಾಯಾಧೀಶರು ಮಾನಸಿಕ ಅಸ್ವಸ್ಥನೊಬ್ಬನನ್ನು ಮುತುವರ್ಜಿವಹಿಸಿ, ಕಟಿಂಗ್, ಶೇವಿಂಗ್ ಹಾಗೂ ಸ್ನಾನ ಮಾಡಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ಗುರುವಾರ ಮಾನಸಿಕ ಅಸ್ವಸ್ಥನನ್ನು ಗಮನಿಸಿದ ಭಟ್ಕಳ ಹಿರಿಯ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ ಕುರಣೆ ಅವರು ಆತನನ್ನು ನ್ಯಾಯಾಲಯದ ಆವರಣಕ್ಕೆ ಕರೆತಂದು ಶುಚಿಗೊಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನ್ಯಾಯಾಲಯಕ್ಕೆ ಆಗಮಿಸುವ ವೇಳೆ ಮಾನಸಿಕ ಅಸ್ವಸ್ಥನನ್ನು ಗಮನಿಸಿದ ನ್ಯಾಯಾಧೀಶರು, ಪೊಲೀಸರಿಗೆ ಮಾಹಿತಿ ನೀಡಿ ಕರೆ ತರುವಂತೆ ಸೂಚಿಸಿದ್ದಾರೆ. ಸ್ಥಳಕ್ಕೆ ಕ್ಷೌರಿಕರನ್ನು ಕರೆಯಿಸಿ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿದ್ದಾರೆ. ಬಳಿಕ ಆರೋಗ್ಯ ಇಲಾಖೆಯವರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ನೀಡಿಸಿದರು. ಬಳಿಕ ಬಟ್ಟೆ ಬದಲಾಯಿಸಿ ಪೊಲೀಸರ ಸಹಾಯದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈತನ ಬಳಿ ನ್ಯಾಯಾಧೀಶರು ವಿಚಾರಿಸಿದಾಗ ತಾನು ಉಡುಪಿ ಜಿಲ್ಲೆಯ ಹಿರಯಡಕ ಗ್ರಾಮದ ನಿವಾಸಿ ನಾಗಭೂಷಣ ಆಚಾರಿ ಎಂದು ಹೇಳಿಕೊಂಡಿದ್ದಾನೆ. ನಗರ ಠಾಣೆ ಪಿಎಸ್​ಐ ಶಿವಾನಂದ, ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ, ಪೌರ ಕಾರ್ವಿುಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಹಕರಿಸಿದ್ದಾರೆ. ನ್ಯಾಯಾಧೀಶರ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net