

ಮಂಗಳೂರು:ನಗರದ ಬೋಳೂರು ಗ್ರಾಮದ ಮಠದಕಣಿ ಕೆನರಾ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂ ಕೋಣೆಯ ಬಾಗಿಲಿನ ಗಾಜಿಗೆ ಕಲ್ಲೆಸೆದು ಗಾಜು ಧ್ವಂಸ ಮಾಡಿದ ಆರೋಪ 6ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5,500 ರೂ. ದಂಡ ಹಾಗೂ ತಿಂಗಳು ಸಾಮಾನ್ಯ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಮಠದಕಣಿ ರಸ್ತೆ ನಿವಾಸಿ ಮನೀಶ್ (20) ಶಿಕ್ಷೆಗೊಳಗಾದ ಅಪರಾಧಿ. 2020 ಜು.9ರಂದು ಘಟನೆ ನಡೆದಿದ್ದು, ಬ್ಯಾಂಕ್‌ಗೆ 3540 ರೂ. ನಷ್ಟ ಉಂಟು ಮಾಡಿದ್ದ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶರಾದ ಪೂಜಾಶ್ರೀ ಎಚ್.ಎಸ್. ಅವರು ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯ ಅಂದಿನ ಪಿಎಸ್‌ಐ ಹಾರುನ್ ಅಖ್ತರ್ ಆರೋಪಿ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದಿಸಿದ್ದರು.