

ಮಂಗಳೂರು: ಬಿ.ಎಸ್.ಎನ್.ಎಲ್. ಟವರ್ ನಿರ್ಮಿಸಲು ಮಠದಕಣಿಯ ಪ್ರಕಾಶ್ ವಿ.ನಾಯಕ್ ಅವರು ಪ್ರಿಯಾ ಎಸ್.ಭಂಡಾರಿ ಅವರಿಂದ 36 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಜೆಎಂಎಫ್‌ಸಿ 5ನೇ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ 36 ಲಕ್ಷ ರೂ. ಪಡೆದ ಹಣ, 70 ಸಾವಿರ ರೂ. ಪರಿಹಾರ ಹಾಗೂ 5 ಸಾವಿರ ರೂ. ದಂಡ ಪಾವತಿಸುವಂತೆ ತೀರ್ಪು ನೀಡಿದೆ.
ಪ್ರಕಾಶ್ ವಿ.ನಾಯಕ್ ಹಣ ಪಡೆದು ವಾಪಸ್ ನೀಡದೆ ವಿಶ್ವಾಸದ್ರೋಹ ಮತ್ತು ಮೋಸ ಮಾಡಿರುವ ಕಾರಣ ಪ್ರಿಯಾ ಎಸ್.ಭಂಡಾರಿ ಅವರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ಅದು ವಿಚಾರಣಾ ಹಂತದಲ್ಲಿದೆ. ಹಣ ವಾಪಸ್ ಕೊಡದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಚಿನ್ಮಯಿ ಅವರು ತೀರ್ಪು ಪ್ರಕಟಿಸಿದ್ದಾರೆ.
ಪ್ರಕಾಶ್ ನಾಯಕ್ 5 ಸಾವಿರ ರೂ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.