ವಿದ್ಯಾರ್ಥಿಗಳ ಸಂಪೂರ್ಣ ವರದಿ ಸಲ್ಲಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಸೂಚನೆ

Judge visits hostel Mandya
Published on

ಮಂಡ್ಯ: ಕಲುಷಿತ ಆಹಾರ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಮಳವಳ್ಳಿ ತಾಲೂಕು ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಭೇಟಿ ನೀಡಿದರು.

ದುರ್ಘಟನೆ ನಂತರ ಶಾಲೆಯಲ್ಲಿ ಸ್ತಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆ ಪುನಾರಂಭಗೊಂಡಿದೆ. ಇದೇ ವೇಳೆ ಎಂ.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂತೆಯೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಂಸ್ಥೆಯ ಕಾರ್ಯದರ್ಶಿ ಲಂಕೇಶ್‌ಗೆ ತರಾಟೆಗೆ ತೆಗೆದುಕೊಂಡ ಅವರು, ಯಾರೋ ಕೊಟ್ಟ ಆಹಾರವನ್ನು ಹೇಗೆ ಮಕ್ಕಳಿಗೆ ನೀಡುತ್ತೀರಾ?. ನಿಮ್ಮ ಮಕ್ಕಳಿಗೆ ಹೀಗೆ ಬೇರೆಯವರು ಕೊಟ್ಟ ಊಟವನ್ನು ಕೊಡುವೀರಾ?. ಇಬ್ಬರು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?. ಆ ಮಕ್ಕಳನ್ನು ಮೇಘಾಲಯದಿಂದ ಕರೆದುಕೊಂಡು ಬಂದವರು ಯಾರು?. ಅವರನ್ನು ಕಾನೂನು ಪ್ರಕಾರ ಪ್ರಕಾರ ಕರೆದುಕೊಂಡು ಬಂದು ದಾಖಲು ಮಾಡಲಾಗಿದೆಯೇ ಸೇರಿದಂತೆ ಹಲವು ಪ್ರಶ್ನೆ ಕೇಳಿ ಅಂದಿನ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಮಕ್ಕಳ ಶೈಕ್ಷಣಿಕ ಮಾಹಿತಿ, ಪಾಲಕರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರದಿಯನ್ನು ನೀಡುವಂತೆ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್‌ಗೆ ಸೂಚಿಸಿದರು.

ಪಾಲಕರೊಂದಿಗೆ ಅಧಿಕಾರಿಗಳ ಸಭೆ

ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯ ಸಭಾಂಗಣದಲ್ಲಿ ಪಾಲಕರ ಸಭೆ ನಡೆಸಿದರು. ನರ್ಸರಿಯಿಂದ 8ನೇ ತರಗತಿಯ ಮಕ್ಕಳಿಗೆ ನಡೆಸಬೇಕಾದ ಪರೀಕ್ಷೆ ಬಗ್ಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು.

ಪಾಲಕ ಆನಂದ್ ಮಾತನಾಡಿ, ಕಳೆದ 39 ವರ್ಷದಿಂದ ಮಕ್ಕಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇಂತಹ ಘಟನೆಯೂ ನಮಗೂ ಅಘಾತ ತಂದಿದೆ. ಗ್ರಾಮೀಣ ಪ್ರದೇಶದ ಅನೇಕ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ನೀವು ಬೇರೆಡೆ ಪರೀಕ್ಷೆ ನಡೆಸಿದರೆ ಮಕ್ಕಳಲ್ಲಿ ಗಲಿಬಿಲಿಯಾಗಲಿದೆ. ಹೀಗಾಗಿ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ಪಾಲಕರು ಮನೆಯಲ್ಲಿ ಮಕ್ಕಳಿಗೆ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಬೇಕು. ಪರೀಕ್ಷೆ ನಡೆಸುವುದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಸಂಯೋಜಕ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net