

ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಬುಧವಾರ ದಿಢೀರ್ ಭೇಟಿ ನೀಡಿ ಕಾಲೇಜಿನ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆ ಕುರಿತು ಜಿಲ್ಲಾ ನ್ಯಾಯಾಲಯಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರವರ ನಿರ್ದೇಶನದ ಮೇರೆಗೆ ಕಾಲೇಜಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಸ್ವಚ್ಛತೆಯ ಹಾಗೂ ಕಾಲೇಜಿನ ಆಡಳಿತ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಅಲ್ಲದೆ ಶೌಚಗೃಹ, ಕೊಠಡಿ ಹಾಗೂ ಸುತ್ತಲಿನ ಅನೈರ್ಮಲ್ಯ ಕಂಡು ಪ್ರಾಂಶುಪಾಲರ ವಿರುದ್ಧ ಕಿಡಿಕಾರಿದರು.
ಪ್ರಾಂಶುಪಾಲರು, ಬೋಧಕರ ಕೊಠಡಿ, ಶಾಲಾ- ಕೊಠಡಿಗಳು ಹಾಗೂ ಬಾಲಕರ ಮತ್ತು ಬಾಲಕಿಯರ ಶೌಚಗೃಹವನ್ನು ಪರಿಶೀಲಿಸಿ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಪ್ರಾಂಶುಪಾಲ ಕೆ.ಟಿ. ರಾಮೇಗೌಡ ಸ್ಥಳದಲ್ಲಿ ಹಾಜರಿಲ್ಲದ ಕಾರಣ ಅವರ ವಿರುದ್ಧ ಕೆಂಡ ಮಂಡಲವಾದರು. ಸ್ವಚ್ಛತೆ ಕಾಪಾಡದಿರುವುದು ಸೇರಿದಂತೆ ಲೋಪದೋಷಗಳ ಬಗ್ಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವಿರುದ್ಧ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು. ಕೂಡಲೇ ಈ ಬಗ್ಗೆ ಎಚ್ಚರವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಿಬ್ಬಂದಿ ಕೊರತೆ : ಒಂದು ಸಾವಿರ ಮಕ್ಕಳು ವ್ಯಾಸಂಗ ಮಾಡುವ ಕಾಲೇಜಿನಲ್ಲಿ ಬೆರಳೆಣಿಕೆಯಷ್ಟು ಸ್ವಚ್ಛತಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿನ ನೇಮಿಸಿದರೆ ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಬಳಿಕ ಕಾಲೇಜಿನ ಕೊಠಡಿಗಳು ಹಾಗೂ ಕಂಪ್ಯೂಟರ್ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
20 ದಿನದಲ್ಲಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸಬೇಕು. ಮುಂದಿನ ತಿಂಗಳು ಬರುತ್ತೇನೆ. ಅಷ್ಟರಲ್ಲಿ ಶೌಚಗೃಹಗಳು ಶುಚಿಯಾಗಿರಬೇಕು. ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಆಗಬೇಕು. ಕಾಲೇಜಿನ ಹೊರಾಂಗಣ ಸೇರಿದಂತೆ ಶಾಲಾ ಕೊಠಡಿಗಳು, ಪ್ರಯೋಗಾಲಯಗಳು ಶುಚಿಯಾಗಿರಬೇಕು. ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಜೀವನ್, ತಾಲೂಕು ನ್ಯಾಯಾಂಗ ಇಲಾಖೆ ಸಿಬ್ಬಂದಿ ಭಗವಾನ್ ಇತರರು ಹಾಜರಿದ್ದರು.