ಎಚ್​ಐವಿ ಮುಕ್ತ ಸಮಾಜಕ್ಕೆ ಅಭಿಯಾನ

5 ckm 3
Published on

ಚಿಕ್ಕಮಗಳೂರು: ಎಚ್​ಐವಿ ಸೋಂಕಿತರಿಗೆ ಧೈರ್ಯ, ಮಾನಸಿಕ ಸ್ಥೈರ್ಯ, ಬೆಂಬಲ ಹಾಗೂ ಸಾಂತ್ವನ ಹೇಳುವ ಕೆಲಸವನ್ನು ವ್ಯಕ್ತಿ ಮತ್ತು ಸಮುದಾಯಗಳು ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ, ನ್ಯಾಯಾಧೀಶೆ ಶುಭಾ ಗೌಡರ್ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದಿಂದ ಗುರುವಾರ ಆಯೋಜಿಸಿದ್ದ ಎಚ್​ಐವಿ ಮೂಲ ಮಾಹಿತಿ ಹಾಗೂ ಕಾಯ್ದೆ ಕುರಿತು ಪ್ಯಾನಲ್ ವಕೀಲರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಾವು ಜಾಗೃತರಾಗಿ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಆದ್ಯತೆ ಕೊಟ್ಟು ದೇಶದಲ್ಲಿ ಆರೋಗ್ಯಕರ ಬದಲಾವಣೆ ತರಬೇಕು. ಏಡ್ಸ್ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಸೀಮಿತವಾಗದೆ ಏಡ್ಸ್ ಮುಕ್ತ ಸಮಾಜಕ್ಕೆ ಮೆಟ್ಟಿಲಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಮಾತನಾಡಿ, ಬಡವ- ಶ್ರೀಮಂತ, ಮೇಲು- ಕೀಳು, ಜಾತಿ- ಧರ್ಮದ ತಾರತಮ್ಯವಿಲ್ಲದೆ ಬರುವಂತಹ ಎಚ್​ಐವಿಯನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಜಾಗೃತಿ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಹಾಗೂ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡರೆ ಏಡ್ಸ್ ಬರಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಥಾಮಸ್, ಡಿಎಚ್​ಒ ಡಾ. ಉಮೇಶ್, ಡಾ. ಟಿ.ಪಿ.ಬಾಲಕೃಷ್ಣ, ವಕೀಲರ ಸಂಘದ ಕಾರ್ಯದರ್ಶಿ ಡಿ.ಬಿ.ಸುಜೇಂದ್ರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net