ಸಾಧನೆಗೆ ಶಿಕ್ಷಣ ಪ್ರಮುಖ ಸಾಧನ

11 NMT
Published on

ನ್ಯಾಮತಿ: ಶಿಕ್ಷಣದಿಂದಲೇ ಸಂವಿಧಾನದ ಕನಸನ್ನು ಸಾಕಾರಗೊಳಿಸಲು ಸಾಧ್ಯ. ಅಲ್ಲದೆ ಶಿಕ್ಷಣ ವ್ಯಕ್ತಿಯ ಕನಸು ನನಸು ಮಾಡಿ ಅತಿ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ದೆಹಲಿ ಲೋಕಪಾಲ ಎಲ್. ನಾರಾಯಣ ಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ್ಞಾನವಾಹಿನಿ ವಿದ್ಯಾಸಂಸ್ಥೆಯ 25 ವರ್ಷದ ಸಂಭ್ರಮಾಚರಣೆಯಲ್ಲಿ ಸಂಸ್ಥೆಯ ಡಿಜಿಟಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮತ್ತು ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲೂ ಜ್ಞಾನವಾಹಿನಿಯಂತಹ ವಿದ್ಯಾಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ಮುಂದಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ರವಿಶಂಕರ ಅವರ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಣ ಹೊರತಾಗಿ ಮಗುವಿನ ಪಠ್ಯೇತರ ಆಸಕ್ತಿಯನ್ನು ಪಾಲಕರು ಪೋ›ತ್ಸಾಹಿಸಬೇಕು. ಪ್ರಸಿದ್ಧ ಕ್ರೀಡಾಪಟು, ಚಿತ್ರನಟರು ಸೇರಿ ಹಲವು ಸಾಧಕರು ಓದಿದ್ದು ಅತಿ ಕಡಿಮೆ, ಆದರೂ ಅವರ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿಯಾಗಿರುತ್ತದೆ. ಆದ್ದರಿಂದ ಪಾಲಕರು ಮಕ್ಕಳನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡದೇ ಅವರ ಆಸಕ್ತಿ ಕ್ಷೇತ್ರಕ್ಕೆ ಸಹಕಾರ ನೀಡಿ ಎಂದರು.

ಶಾಸಕ ಶಾಂತನಗೌಡ ಮಾತನಾಡಿ, ವಿದ್ಯಾಸಂಸ್ಥೆ ಆರಂಭದಿಂದ 2 ದಶಕಗಳಿಂದ ಪ್ರಗತಿ ಸಾಧಿಸುತ್ತಿದೆ. ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುವ ಲೋಕಪಾಲರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಮತ್ತು ಅವರು ಕನ್ನಡಿಗರೆಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಮಾತನಾಡಿ, ಈ ವಿದ್ಯಾಸಂಸ್ಥೆಯು 25 ವರ್ಷಗಳಿಂದಲೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಮುನ್ನ ಶಾಲೆಯು ಇಲಾಖೆಯ ನೋಂದಣಿ ಹಾಗೂ ಅನುಮತಿ ಪಡೆದಿದೆಯೇ ಎಂದು ತಿಳಿಯುವುದು ಅತ್ಯವಶ್ಯಕ ಎಂದರು.

ಹರ್ಷ ಕಾಮತ್ ಪರಿಚಯಿಸಿದರು. ಡಾ. ತುಷಾರ್ ಮಾತನಾಡಿದರು. ವಿದ್ಯಾರ್ಥಿನಿ ಪದ್ಮಶ್ರೀ ಹಾಗೂ ನಾಟ್ಯ ವಿಶಾರದೆ ಅಮೂಲ್ಯ ಅವರನ್ನು ಸನ್ಮಾನಿಸಿದರು.

ಸಂಸ್ಥೆಯ ಕಾರ್ಯದರ್ಶಿ ರವಿಶಂಕರ್, ಮಾಜಿ ಸಚಿವ ರೇಣುಕಾಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ, ಕ್ಷಿಜಲೀಆಪ್ ಸಂಸ್ಥಾಪಕ ದೀಪಕ್ ರಾಮಚಂದ್ರ, ಪಿಆರ್​ಒ ಅಣ್ಣಪ್ಪ ಇತರರಿದ್ದರು.

ಯಮುನಾ ಪ್ರಾರ್ಥಿಸಿದರು. ಹೇಮಾವತಿ ಸ್ವಾಗತಿಸಿದರು. ಸಹನಾ ನಿರೂಪಿಸಿದರು. ಅಂಬಿಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net