

ಮೈಸೂರು: ನೀವು ಕುವೆಂಪು ಉತ್ತರಾಧಿಕಾರಿಯೇ..?
ಇದು ಸಾಹಿತಿ ದೇವನೂರು ಮಹದೇವ ಅವರಿಗೆ ಎದುರಾದ ಪ್ರಶ್ನೆ. ಇದಕ್ಕೆ ಅಷ್ಟೇ ಜಾಣ್ಮೆಯಿಂದ ಉತ್ತರಕೊಟ್ಟರು ಅವರು.
ನಾನು ಕುವೆಂಪು ಉತ್ತರಾಧಿಕಾರಿ ಹೌದೋ, ಅಲ್ಲವೋ ನೀವೇ ನಿರ್ಣಯಿಸಿ. ಇದು ಅವರವರ ಭಾವಕ್ಕೆ ಬಿಟ್ಟಿದ್ದು. ಕುಸುಮಾಬಾಲೆ ಮಲೆಗಳಲ್ಲಿ ಮದುಮಗಳ ಮೊಮ್ಮಗಳ ತರಹ ಇದೆ ಎಂದು ಸಂದರ್ಶಕರೊಬ್ಬರು ಹೇಳುತ್ತಾರೆ. ಅದೇ ನನಗೆ ಇಷ್ಟ. ಅಲ್ಲೇ ಉತ್ತರ ಇದೆ ಎಂದು ಪ್ರತಿಕ್ರಿಯಿಸಿದರು.
ಅಭಿರುಚಿ ಪ್ರಕಾಶನದ ವತಿಯಿಂದ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಆಯೋಜಿಸಿದ್ದ ದೇವನೂರ ಮಹದೇವ ಜತೆ ಮಾತುಕಥೆ; ಆಯ್ದ ಸಂಕಲನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದಕ್ಕೆ ಸಾಕ್ಷಿ ಆಯಿತು.
ನನಗೆ ಕುವೆಂಪು ಪ್ರಶಸ್ತಿ ಬಂದಾಗ ಲೇಖಕ ನಟರಾಜ್ ಹುಳಿಯಾರ್ ಕುವೆಂಪು ಫೋಟೋ ನಿಮ್ಮನ್ನು ನೋಡುತ್ತಿಲ್ಲ ಎಂದು ಕೇಳಿದರು. ಅದು ನನಗೆ ತುಂಬ ಕ್ಷೇಮ ಎಂದು ಉತ್ತರಿಸಿದೆ. ಏಕೆಂದರೆ ಅವರು ನನ್ನನ್ನು ನೋಡಿದರೆ ಬೀಡಿ, ಸಿಗರೇಟು ಸೇದುವಂತಿಲ್ಲ. ಆ ಕಡೆ ಈ ಕಡೆ ನೋಡಲಾಗುವುದಿಲ್ಲ. ಬಹಳ ಗಂಭೀರವಾಗಿ ಇರಬೇಕಾಗುತ್ತದೆ ಎಂದು ಉತ್ತರ ಕೊಟ್ಟಿದ್ದೆ ಎಂದರು.
ಸಾಹಿತಿ ಕೃಷ್ಣಮೂರ್ತಿ ಹನೂರು ಮಾತನಾಡಿ, ದೇವನೂರ ಮಹದೇವ ಅವರೊಬ್ಬ ಲೋಕ ಸಂವಾದಿ. ಅವರ ಮಾತಿನಲ್ಲಿ ಕಥೆಗಳು, ವಿಚಾರ, ಪ್ರಸಕ್ತ ವಿಷಾದವೂ ಇರುತ್ತದೆ. ಈ ಸಮಸ್ಯೆಗಳಿಗೆ ಏನು ಮಾಡಬೇಕೆಂಬ ಪರಿಹಾರವೂ ಇರುತ್ತದೆ. ಅವರು ಯಾವ ಧರ್ಮಕ್ಕೂ ಸೇರಲ್ಲ. ಆದರೆ, ಅವರು ಎಲ್ಲ ಧರ್ಮಕ್ಕೂ ಸಲ್ಲುತ್ತಾರೆ. ಅವರದ್ದು ಮಾನವೀಯ ಧರ್ಮ ಎಂದರು.
ಅಭಿವೃದ್ಧಿಯ ಬಗ್ಗೆ ಆತಂಕದ ಮಾತಿದೆ. ಹಾಗೆಯೇ ಮಹದೇವ ಅವರಿಗೆ ಗ್ರಾಮಗಳ ಬಗ್ಗೆ ಭರವಸೆ ಇದೆ. ಗ್ರಾಮಗಳನ್ನು ಮುಗಿಸದೆ ಇನ್ನೊಂದು ದಿಕ್ಕಿನಲ್ಲಿ ಕೊಂಡೊಯ್ಯಬೇಕಿದೆ ಎಂಬ ಆಶಯ ಈ ಕೃತಿಯನ್ನು ಓದಿದಾಗ ಅರಿವಿಗೆ ಬರುತ್ತದೆ. ಇದರಲ್ಲಿ ಆಧುನಿಕ ತಲ್ಲಣಗಳಿಗೆ ಔಷಧ ಇದೆ. ಇದುವೇ ಪರಿಹಾರ ರೀತಿಯಲ್ಲಿ ಕಾಣಿಸುತ್ತದೆ. ವಚನ ಸಾಹಿತ್ಯ ಹಳೆಯದಲ್ಲ. ಅದು ಆಧುನಿಕ ಸ್ಥಿತಿ ಎಂಬುದು ಮಹದೇವರ ಮಾತು ಎಂದರು.
ದುರಿತ ರಾಜಕಾರಣದ ಸಂದರ್ಭದಲ್ಲಿ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಾನು ಮಗಳಾಗಬೇಕು ಎಂಬ ದೇವನೂರರ ಸಾಲು ಔಷಧವಾಗಿದೆ. ಪುರುಷರು ಗಂಡಸಾದರೆ ಬಹಳ ಕಷ್ಟ. ಪುರುಷರ ಗಂಡಸತನ ಇತಿಹಾಸದಲ್ಲಿ ಏನೆಲ್ಲ ಮಾಡಿದೆಂಬುದು ತಿಳಿದಿದೆ. ಅದು ಯುದ್ಧ, ರಕ್ತ ಹಿರಿದೆ. ಪರಾಕ್ರಮದ ಮರೆಯಲ್ಲಿ ಎಷ್ಟು ಸೈನಿಕರು ಸತ್ತು ಹೋಗಿದ್ದಾರೆ. ಅವರ ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ಅಲ್ಲಿ ವಿಜಯದ ಕುರಿತಲ್ಲ. ಸೋಲಿನ ಕುರಿತು ಮಾತನಾಡಬೇಕು ಎಂದರು.
ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ಮೂರು ದಶಕಗಳಿಂದ ಮಹದೇವ ಅವರು ಲೋಹಿಯಾ, ಗಾಂಧಿ, ಮಾರ್ಕ್, ಅಂಬೇಡ್ಕರ್ ಅವರ ಚಿಂತನೆ ಬಿತ್ತಿದ್ದಾರೆ. ತಮ್ಮ ಕತೆ, ಕಾದಂಬರಿಯಲ್ಲಿ ತತ್ವ ಇಲ್ಲ ಎನ್ನುತ್ತಾರೆ. ಅಲ್ಲಿ ಮಾನವೀಯ ತತ್ವ ಇದೆ ಎಂದರು.
ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ ಮಾತನಾಡಿ, ಮಹದೇವರ ಕೃತಿಯನ್ನು ದೇಶದ ಎಲ್ಲ ಭಾಷೆಗಳಲ್ಲಿ ಅನುವಾದ ಮಾಡಿ ದಲಿತ ಸಮುದಾಯಗಳ ಐಕ್ಯತೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕಿ ಎಚ್.ಜೆ.ಸರಸ್ವತಿ ಮಾತನಾಡಿದರು. ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ, ವಿದ್ವಾಂಸ ಪ್ರೊ.ಒ.ಎಲ್. ನಾಗಭೂಷಣ, ನಟ ಪ್ರಕಾಶ್‌ರಾಜ್, ಚಿಂತಕ ಡಾ.ತುಕಾರಾಂ, ರಂಗಕರ್ಮಿ ಎಚ್.ಜನಾರ್ಧನ್, ಚಿಂತಕರಾದ ಡಾ.ಎಸ್.ನರೇಂದ್ರಕುಮಾರ್, ಚಂದ್ರಶೇಖರ್ ಐಜೂರ್, ಚಿಕ್ಕಮಗಳೂರು ಗಣೇಶ್, ವರಹಳ್ಳಿ ಆನಂದ್, ವೈ.ಎಸ್. ಅಭಿಷೇಕ್ ಇತರರಿದ್ದರು.