

ಕೊಪ್ಪಳ: ಶಿಥಿಲಗೊಂಡ ಕೊಠಡಿ ದುರಸ್ಥಿಗೆ ಆಗ್ರಹಿಸಿ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ದೇವೇಂದ್ರ ಪಂಡಿತ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದರು.
ಆಗುತ್ತಿರುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿದರು. ಮುಖ್ಯ ಶಿಕ್ಷಕರಿಗೆ ಸಮಸ್ಯೆಗೆ ಕಾರಣವೇನೆಂದು ಪ್ರಶ್ನಿಸಿದರು. ಕೊಠಡಿ ಮಂಜೂರಾಗಿ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಪ್ರತಿಭಟನೆ ಮೊಟಕುಗೊಳಿಸಿದ್ದಾಗಿ ತಿಳಿಸಿದರು.
ಬಳಿಕ ಮಾತನಾಡಿದ ನ್ಯಾಯಾಧೀಶರು, ಜಿಪಂ ಸಿಇಒ ಅವರು ಮಾಹಿತಿ ಪಡೆದುಕೊಂಡಿದ್ದು, ಕ್ರಮವಹಿಸಿವುದಾಗಿ ತಿಳಿಸಿದ್ದಾರೆ. ಶ್ರೀ ಸಮಸ್ಯೆ ಸರಿಪಡಿಸಿ ಮಕ್ಕಳಿಗೆ ಉತ್ತಮ ಕೊಠಡಿ ನಿರ್ಮಿಸಿಕೊಡುವಂತೆ ತಿಳಿಸಲಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಚಂದ್ರಶೇಖರ ಸಿ. ಅವರ ಸೂಚನೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆದಿದ್ದು, ವರದಿ ನೀಡುವುದಾಗಿ ತಿಳಿಸಿದರು.