

ಸಂಶಿ: ಸಮೀಪದ ಗುಡೇನಕಟ್ಟಿ ಗ್ರಾಮದ ಮಸೀದಿಯಲ್ಲಿ ಶುಕ್ರವಾರ ಮುಸ್ಲಿಂ ಸಮಾಜದವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈದ್ ಮಿಲಾದ್ ಹಬ್ಬದ ನಿಮಿತ್ತ ಗುಡೇನಕಟ್ಟಿ ಮಸೀದಿಯನ್ನು ವಿದ್ಯುದ್ದೀಪಗಳು ಹಾಗೂ ತರಹೇವಾರಿ ಹೂಗಳಿಂದ ಅಲಂಕರಿಸಲಾಗಿತ್ತು. ಮುಸ್ಲಿಂ ಸಮಾಜದವರು ಮಕ್ಕಾ-ಮದೀನಾ ಫೋಟೋಗಳಿಗೆ ಪೂಜೆ ಸಲ್ಲಿಸಿದರು. ಗುಡೇನಕಟ್ಟಿ, ಯರಿನಾರಾಯಣಪುರ ಹಾಗೂ ಸಂಶಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಸಿಹಿ ಪಾಕ ವಿತರಿಸಲಾಯಿತು. ಮುಸ್ಲಿಂ ಸಮಾಜದವರು ಪರಸ್ಪರ ಹಬ್ಬ ಆಚರಣೆಯ ಶುಭಾಶಯ ಕೋರಿ ಲೋಕದ ಒಳಿತು ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಸವರಾಜ ಯೋಗಪ್ಪನವರ ಸೇರಿ ಹಿಂದು ಬಾಂಧವರು ಪಾಲ್ಗೊಂಡು ಫವೈಕ್ಯದಿಂದ ಹಬ್ಬವನ್ನು ಆಚರಿಸಿದರು.