

ಮೈಸೂರು: ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಕಾಲೇಜಿ 14ನೇ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 656 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.
ವನ್ಯಜೀವಿ ತಜ್ಞ ಡಾ.ಕೆ. ಉಲ್ಲಾಸ ಕಾರಂತ ಮಾತನಾಡಿ, ದೇಶ ಹಾಗೂ ಜಗತ್ತಿನ ಜನಸಂಖ್ಯೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಾಗೂ ಹೊಸ ತಂತ್ರಜ್ಞಾನದ ಅಳವಡಿಕೆ ಅನಿವಾರ್ಯವಾಗಿದೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನವನ್ನು ಪಕ್ಕಕ್ಕೆ ಸರಿಸಿ ಪರಿಸರ ಸಂರಕ್ಷಣೆ ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ ಕಾರಣ ತಂತ್ರಜ್ಞಾನವನ್ನು ಅಪ್ಪಿಕೊಂಡೇ ನಿಸರ್ಗವನ್ನು ಉಳಿಸುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಹೊಸ ತಂತ್ರಜ್ಞಾನಗಳು ಬೇಡ, ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂಬ ವಾದ ಇದೆ. ಹೊಸ ತಂತ್ರಜ್ಞಾನಗಳು ಬೇಡ ಎಂಬ ಮನಸ್ಥಿತಿ ಇಟ್ಟುಕೊಳ್ಳಬಾರದು. ಹೊಸ ತಂತ್ರಜ್ಞಾನಗಳಿಂದ ಪರಿಸರಕ್ಕೆ ಆಗಿರುವ ಲಾಭವನ್ನು ಸಹ ನಾವು ನೋಡಬೇಕಾಗುತ್ತದೆ. ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ನಮ್ಮ ನಿಸರ್ಗ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳು ಪರಿಹಾರವಾಗಿವೆ. ಹೀಗಾಗಿ ತಂತ್ರಜ್ಞಾನ ಹಾಗೂ ಅಭಿವೃದ್ಧಿಯನ್ನು ಸಕರಾತ್ಮಕವಾಗಿ ನೋಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಈ ಹಿಂದೆ ಆಹಾರಕೋಸ್ಕರ ಅರಣ್ಯದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲಾಗುತಿತ್ತು. ಆದರೆ, ಹಸಿರು ಕ್ರಾಂತಿಯ ಪರಿಣಾಮದಿಂದ ದೇಶದಲ್ಲಿ ಹಲವಾರು ಜನರ ಹಸಿವು ನೀಗಿತು. ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳು ತೆರೆಯಿತು. ಹೀಗಾಗಿ ಜನರು ಮಾಂಸಕ್ಕಾಗಿ ಕಾಡಿನಲ್ಲಿ ವನ್ಯಪ್ರಾಣಿಗಳನ್ನು ಬೇಟೆಯಾಡುವುದನ್ನು ಕಡಿಮೆ ಮಾಡಿದರು. ಆದರೆ, ಸಾಕಷ್ಟು ವರ್ಷಗಳ ಕಾಲ ಜನರು ಅಡುಗೆಗೆ ಕಾಡಿನಲ್ಲಿ ದೊರೆಯುತ್ತಿದ್ದ ಕಟ್ಟಿಗೆಯನ್ನು ಬಳಕೆ ಮಾಡುತ್ತಿದ್ದರು. ಅಡುಗೆ ಅನಿಲ ಸಿಲಿಂಡರ್ ಬಂದ ನಂತ ಕಟ್ಟಿಗೆ ಬಳಕೆ ಕಡಿಮೆಯಾಯಿ ತು. ಇದೆಲ್ಲವೂ ಸಾಧ್ಯವಾಗಿದ್ದು ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ. ಹೀಗಾಗಿ ತಂತ್ರಜ್ಞಾನ ಹಾಗೂ ಅಭಿವೃದ್ಧಿಯನ್ನು ಪೂರ್ಣವಾಗಿ ವಿರೋಧಿಸುವುದು ಸರಿಯಲ್ಲ. ನಾವು ನಿಸರ್ಗವನ್ನು ಉಳಿಸಲು ಹೊಸ ದೃಷ್ಟಿಕೋನದಲ್ಲಿ ನೋಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಸುತ್ತೂರು ಶ್ರೀ ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ದೊಡ್ಡರಂಗೇಗೌಡ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಜಿ.ಸಿ.ಜಿ. ಬೆಟಸೂರ ಮಠ, ಪ್ರಾಂಶುಪಾಲ ಡಾ.ಎಚ್.ಬಿ. ಸುರೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎನ್. ಸ್ವಾಮಿ, ಶೈಕ್ಷಣಿಕ ಡೀನ್ ಡಾ. ರೇಚಣ್ಣ ಇದ್ದರು.