ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

jss college
Published on

ಮೈಸೂರು: ಪ್ರಸ್ತುತ ಸಮಾಜಕ್ಕೆ ಸಾಂಸ್ಕೃತಿಕ ತಿಳುವಳಿಕೆ ಮತ್ತು ಕ್ರೀಡಾ ಮನೋಭಾವ ಅವಶ್ಯಕ ಎಂದು ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಹೇಳಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಗಳನ್ನು ಮಾಡಲು ವಿನಯ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಮಾತನಾಡಿ, ಮನುಷ್ಯನು ಆರೋಗ್ಯವಂತನಾಗಿರಲು ಕ್ರೀಡೆಯು ಅತ್ಯವಶ್ಯಕ. ಕ್ರೀಡೆಯಲ್ಲಿ ತೊಡಗಲು ವಯಸ್ಸು ಮುಖ್ಯವಲ್ಲ, ಆಸಕ್ತಿ ಇದ್ದರೆ ಸಾಕು ಎಂದು ಹೇಳಿದರು.

ಯುವ ಉದ್ಯಮಿ ಯಶಸ್ವಿನಿ ಮಾತನಾಡಿ, ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಸಾಧನೆಗೆ ತಾಳ್ಮೆ ಬಹಳ ಮುಖ್ಯ. ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಬಹುಮುಖ್ಯವಾದ ಪಾತ್ರ ವಹಿಸುತ್ತವೆ. ನಿಜವಾದ ಕಲಿಕೆ ಎಂದರೆ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ರೂಪಿಸುವುದು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ರೇಚಣ್ಣ, ಸಾಂಸ್ಕೃತಿಕ, ಸಾಹಿತ್ಯಕ ವೇದಿಕೆಯ ಸಂಚಾಲಕ ಹೊನ್ನಶೆಟ್ಟಿ, ಕ್ರೀಡಾ ವೇದಿಕೆಯ ಸಂಚಾಲಕಿ ಎ.ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net