

ಮೈಸೂರು: ನಗರದ ಜೆಎಸ್‌ಎಸ್ ಮೈಸೂರು ಅರ್ಬತ್ ಹಾತ್‌ನಲ್ಲಿ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಕೈಮಗ್ಗ ಇಲಾಖೆ ಮತ್ತು ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಕೈಮಗ್ಗ ಮೇಳವನ್ನು ಡಿ.18ರಿಂದ ಜ.2ರವರೆಗೆ ಹಮ್ಮಿಕೊಳ್ಳಲಾಗಿದೆ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ತಿಳಿಸಿದರು.
ನೇಕಾರರು, ನೇಕಾರರ ಸಹಕಾರ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ 60ಕ್ಕೂ ಹೆಚ್ಚು ನೇಕಾರರು ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ನೇಕಾರರು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ ರೇಷ್ಮೆ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಚಿವರಂ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬುಟಿಕ್ ಸೀರೆ, ಪಶ್ಚಿಮ ಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರ ಪ್ರದೇಶದ ಬನಾರಸ್ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒಡಿಶಾದ ಸಂಬಲ್‌ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರದ ಪಶ್ಮಿನಾ ಶಾಲ್, ಆಂಧ್ರಪ್ರದೇಶದ ಗೊದ್‌ವಾಲ್ ರೇಷ್ಮೆ ಸೀರೆ, ಕಲ್ಮಕಾರಿ ಸೀರೆ, ಪೊಚಂಪಲ್ಲಿ ಸೀರೆಗಳು, ಗುಜರಾತ್‌ನ ಪಟೋಲ ರೇಷ್ಮೆ ಸೀರೆಗಳು ಇತರೆ ರಾಜ್ಯದ ರೇಷ್ಮೆ ಸೀರೆಗಳು, ಕಾಟನ್ ಸೀರೆಗಳು ದೊರೆಯಲಿವೆ. ಎಲ್ಲ ಮಾರಾಟಗಾರರು ಶೇ. 20 ರಿಯಾಯಿತಿ ನೀಡಲಿದ್ದಾರೆ. ಡಿ.18ರಂದು ಸಂಜೆ 4ಕ್ಕೆ ಮೇಳಕ್ಕೆ ಚಾಲನೆ ದೊರೆಯಲಿದೆ ಎಂದರು. ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ ತಳವಾರ, ಜೆಎಸ್‌ಎಸ್ ಅರ್ಬನ್ ಹಾತ್ ಯೋಜನಾಧಿಕಾರಿ ಶಿವನಂಜಪ್ಪ, ಸಂಯೋಜಕ ರಾಕೇಶ್ ರೈ ಇದ್ದರು.