ಪ್ರಧಾನಿಗೆ ಜೆಎಸ್‌ಎಸ್ ಶಾಲೆ ವಿದ್ಯಾರ್ಥಿನಿಯ ಕೋರಿಕೆ; ಶಾಲಾ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಅಳವಡಿಸಿ

30 Dwd 2A Advika Ajay - Copy
Published on

ಧಾರವಾಡ: ಶಾಲಾ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಅಳವಡಿಸಬೇಕು ಎಂದು ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾಳೆ.
ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನ (ಸಿಬಿಎಸ್‌ಇ) 6ನೇ ತರಗತಿ ವಿದ್ಯಾರ್ಥಿನಿ ಅದ್ವಿಕಾ ಅಜಯ್, ಶಾಲೆಯ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮಾಡಿದ ಪೋಸ್ಟ್ ವೈರಲ್ ಆಗಿದೆ. ಹಿಂದಿಯಲ್ಲಿ ಅರಳು ಹುರಿದಂತೆ ಪ್ರಧಾನಿ ಅವರಿಗೆ ಕೋರಿಕೆಯ ವಿಡಿಯೋ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.
ಭಾರತದಾದ್ಯಂತ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಗಳು ತಂದೆ- ತಾಯಿ, ಪೋಷಕರು, ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುವುದು ಮತ್ತು ಪರಿಣಾಮಕಾರಿ ಸಂವಹನವನ್ನು ಬೆಳೆಸುವಂಥ ಅಧ್ಯಾಯವನ್ನು ಸೇರ್ಪಡೆ ಮಾಡಬೇಕು. ಹಿಂದಿ ಅಥವಾ ಇಂಗ್ಲಿಷ್ ಭಾಷಾ ಪಠ್ಯದಲ್ಲಿ `ತಂದೆ- ತಾಯಿ ನಮ್ಮ ಆದರ್ಶ, ಅವರನ್ನು ಸಮ್ಮಾನ ಮಾಡಬೇಕು' ಎಂಬ ಅಧ್ಯಾಯ ಸೇರಿಸುವಂತೆ ಕೋರಿದ್ದಾಳೆ.
ಅದ್ವಿಕಾಳ ವಿಡಿಯೋ ಜನರ ಹೃದಯವನ್ನು ಸೂರೆಗೊಂಡಿದೆ. ನಮ್ಮ ಪಾಲಕರನ್ನು ಗೌರವಿಸುವುದು ಮತ್ತು ಉತ್ತಮ ಸಂವಹನ ಮÁಡುವುದು ನಮ್ಮ ಕರ್ತವ್ಯ. ಈ ದಿಸೆಯಲ್ಲಿ ಇದನ್ನು ಔಪಚಾರಿಕ ಶಿಕ್ಷಣದಲ್ಲಿ ಕಡೆಗಣಿಸಲಾಗುತ್ತದೆ. ಈ ವಿಷಯ ಕುರಿತು ಒಂದು ಅಧ್ಯಾಯ ಸೇರಿಸುವುದರಿಂದ ತಲೆಮÁರುಗಳ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಕುಟುಂಬ ಬಂಧಗಳನ್ನು ಬಲಪಡಿಸಬಹುದು ಎಂದು ಅದ್ವಿಕಾ ಹೇಳಿದ್ದಾಳೆ.
ಅದ್ವಿಕಾಳ ಕರೆಯು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಬೆಂಬಲಿಗರಿ೦ದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದ ಶಿಕ್ಷಣ ಸಚಿವರೂ ಇತ್ತ ಗಮನ ಹರಿಸಬೇಕು ಎಂದು ಅದ್ವಿಕಾ ಕೋರಿದ್ದಾಳೆ. ಈ ಪುಟ್ಟ ಬಾಲಕಿಯ ಮನವಿಯು ರಾಷ್ಟ್ರೀಯ ಪಠ್ಯಕ್ರಮದ ಪರಿಷ್ಕರಣೆಗೆ ಪ್ರೇರೇಪಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net