

ಮೈಸೂರು: ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಡಿ.6ರವರೆಗೆ ಹಮ್ಮಿಕೊಂಡಿರುವ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣ ಸಂಗೀತ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು. ಮೊದಲ ದಿನ ಹೇರಂಭ ಹಾಗೂ ಹೇಮಂತ ಸಹೋದರರ ದ್ವಂದ್ವ ಕೊಳಲುವಾದ ಸಂಗೀತ ಸಮ್ಮೇನಕ್ಕೆ ಮೆರಗು ನೀಡಿತು.
ವಯೋಲಿನ್ ವಾದಕ ಮೈಸೂರು ಮಂಜುನಾಥ್ ಮಾತನಾಡಿ, ಭಾರತೀಯ ಸಂಗೀತ ವಿಶ್ವಾದ್ಯಂತ ಮನ್ನಣೆ ಪಡೆದುಕೊಂಡಿದೆ. ಭಾರತೀಯ ಸಂಗೀತ ಉತ್ಕೃಷ್ಟತೆ ಹಾಗೂ ಕ್ರಿಯಾಶೀಲತೆ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ ಶ್ರೇಷ್ಠ ಸಂಗೀತಕ್ಕೆ ಉತ್ತೇಜನ ನೀಡುವ ಸಲುವಾಗಿ ಜೆಎಸ್‌ಎಸ್ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಸಂಗೀತ ವಿದ್ವಾಂಸರು ಒಂದೆಡೆ ಸೇರಲು ಹಾಗೂ ಸಂಗೀತದ ಹೊಸ ಆವಿಷ್ಕಾರದ ಕುರಿತು ಚರ್ಚಿಸಲು ಸೂಕ್ತ ವೇದಿಕೆಯಾಗಿದೆ ಎಂದರು.
ಸಮ್ಮೇಳನ ಉದ್ಘಾಟಿಸಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ಭಾರತೀಯ ಸಂಗೀತ ಕಲಿಯಲು ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಭಾರತೀಯ ಸಂಗೀತ ಹಾಗೂ ಸಂಸ್ಕೃತಿ ಎಷ್ಟು ದೊಡ್ಡದು ಎಂದು ಮನವರಿಕೆಯಾಗಬೇಕಾದರೆ ವಿದೇಶಕ್ಕೆ ಭೇಟಿ ನೀಡಬೇಕು. ವಿದೇಶದಲ್ಲಿ ಭಾರತೀಯರನ್ನು, ಭಾರತೀಯ ಸಂಸ್ಕೃತಿ ಹಾಗೂ ಸಂಗೀತವನ್ನು ಪ್ರೀತಿಸುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದರು.
ಸರ್ಕಾರದ ನೆರವು ಇಲ್ಲದೆ ಜೆಎಸ್‌ಎಸ್ ಸಂಗೀತ ಸಭಾ ಸಂಗೀತ ಸಮ್ಮೇಳನ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಚಾರ. ಮೈಸೂರಿನಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದ ಯಾವುದೇ ಭಾಗಗಳಲ್ಲೂ ನಡೆಯುವುದಿಲ್ಲ, ಇದು ಮೈಸೂರಿನ ಹಿರಿಮೆ ಎಂದರು.
ಹಿರಿಯ ಸಂಗೀತ ವಿದ್ವಾಂಸ, ಸಮ್ಮೇಳನಾಧ್ಯಕ್ಷ ಎ.ವಿ. ಆನಂದ್ ಮಾತನಾಡಿ, ಮೈಸೂರು ನನ್ನ ಹೃದಯಕ್ಕೆ ಹತ್ತಿರವಾದ ಊರು. ಮೈಸೂರು ಸಾಂಸ್ಕೃತಿಕ ನಗರಿ ಎಂಬುದು ಇದಕ್ಕೆ ಕಾರಣ. ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ರೂಪುಗೊಳ್ಳಲು ಮೈಸೂರು ಮಹಾರಾಜರ ಕೊಡುಗೆ ಅಪಾರವಾದದ್ದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಮಾತನಾಡಿ, ಸಂಗೀತವನ್ನು ಐದನೇ ವೇದ ಎಂದು ಕರೆಯಲಾಗುತ್ತದೆ. ಸಂಗೀತ ಪ್ರತಿಯೊಬ್ಬರ ಮನಸನ್ನು ಸೆಳೆಯುತ್ತದೆ. ಮೈಸೂರು ಸಾಂಸ್ಕೃತಿಕ ನಗರಿಯಾಗಿ ರೂಪುಗೊಳ್ಳಲು ಮೈಸೂರು ಮಹಾರಾಜರ ಆಶ್ರಯ ಹಾಗೂ ಆಶಯ ಕಾರಣ ಎಂದು ಹೇಳಿದರು. ವೇದಿಕೆಯಲ್ಲಿ ಜೆಎಸ್‌ಎಸ್ ಸಂಗೀತ ಸಭಾದ ಅಧ್ಯಕ್ಷ ಮೈಸೂರು ನಾಗರಾಜ್ ಇದ್ದರು.