ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸುವ ಪ್ರಯತ್ನ ಅಗತ್ಯ

27 Dwd 1
Published on

ಧಾರವಾಡ: ಕಥೆ ಹೇಳುವ ಕಾಲ ಮಾಯವಾಗಿ ಕೇವಲ ಮೊಬೈಲ್ ಹಾಗೂ ಟಿವಿಗಳಲ್ಲಿ ಕಾರ್ಟೂನ್‌ಗಳನ್ನು ವೀಕ್ಷಿಸುವ ಸಮಯ ಬಂದಿದೆ. ಇದರಿಂದ ಭಾಷೆ ಬೆಳವಣಿಗೆಯಾಗುತ್ತಿಲ್ಲ. ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಇದರಿಂದ ಭಾಷಾ ಕೌಶಲ ಬೆಳೆಸಲು ಸಾಧ್ಯ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಬಸು ಬೇವಿನಗಿಡದ ಹೇಳಿದರು.
ನಗರದ ಜೆಎಸ್‌ಎಸ್ ಸಂಸ್ಥೆಯ ಸನ್ನಿಽ ಕಲಾಕ್ಷೇತ್ರದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮದಿನ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಇತ್ತೀಚೆಗೆ ಆಯೋಜಿಸಿದ್ದ ಚೆನ್ನುಡಿ ಗ್ರಂಥದ ಆಯ್ದ ೭೫ ಕಥೆಗಳ ವಾಚನ, ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವ್ಯಕ್ತಿ ಆಲಿಕೆ, ಓದುವುದು ಹಾಗೂ ಬರವಣಿಗೆಯಿಂದ ಭಾಷಾ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾನೆ. ಅದು ಆತನಲ್ಲಿ ಸಂವಹನದ ಉತ್ಕೃಷ್ಟತೆಯನ್ನು ಬೆಳೆಸಿ ಉತ್ತಮ ವ್ಯಕ್ತಿತ್ವಕ್ಕೆ ದಾರಿಯಾಗುತ್ತದೆ. ಚೆನ್ನುಡಿ ಗ್ರಂಥದ ಆಯ್ದ ಗ್ರಂಥದ ಕಥೆಗಳನ್ನು ಹೇಳಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಪ್ರಶಂಸನೀಯ ಎಂದರು.
ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಡಾ. ಹೆಗ್ಗಡೆಯವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಮಹಿಳಾ ಉದ್ಯೋಗ ಮೇಳಗಳು, ಶ್ರದ್ಧಾ ಕೇಂದ್ರಗಳ ಸ್ವಚ್ಛತೆ, ವೃದ್ಧಾಶ್ರಮದ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ಮಹಾವೀರ ಉಪಾಧ್ಯೆ, ಪ್ರಾಚಾರ್ಯೆ ಉಷಾ ಸಂತೋಷ, ಸಾವಿತ್ರಿ ಲಿಗಾಡೆ, ನಿರ್ಮಲಾ ಪಾಟೀಲ, ಕಮಲಾಕ್ಷಿ ಸನ್ನಕ್ಕಿ, ಇತರರಿದ್ದರು. ರಶ್ಮಿ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net