

ಮೈಸೂರು: ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವ ಜತೆಗೆ ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಣಿಪಾಲ್ ನರ್ಸಿಂಗ್ ಕಾಲೇಜು ಡೀನ್ ಡಾ.ಜುಡಿತ್ ಏಂಜೆಲಿಟ್ಟಾ ನೊರೊನಾ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಡಾ.ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪದವಿ ಪೂರೈಸಿದ ಮಾತ್ರಕ್ಕೆ ಕಲಿಕೆ ಮುಕ್ತಾಯಗೊಳ್ಳುವುದಿಲ್ಲ. ಜೀವನ ಒಂದು ಪಯಣ, ಈ ಪಯಣದಲ್ಲಿ ಹೊಸತು ಕಲಿಯುವ ಅವಕಾಶಗಳು ನಿರಂತವಾಗಿ ದೊರೆಯುತ್ತದೆ. ಹಾಗಾಗಿ ಕಲಿಕೆಯನ್ನು ನಿರಂತರವಾಗಿ ಮುಂದುವರೆಸಿ. ಜ್ಞಾನ ನಿಮ್ಮಲ್ಲಿ ಭರವಸೆ ಮೂಡಿಸುವ ಜತೆಗೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಗೆಲುವನ್ನು ತಂದುಕೊಡುತ್ತದೆ. ಜ್ಞಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಮತ್ತೊಬ್ಬರಿಂದ ಸ್ಫೂರ್ತಿ ಪಡೆದು ಸಾಧನೆ ತೋರಲು ಮುಂದಾಗಿ ಎಂದು ಕರೆ ನೀಡಿದರು.
ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕೋರ್ಸ್‌ಗಳು ವಿಜ್ಞಾನದ ತಳಹದಿಯನ್ನು ಹೊಂದಿರುತ್ತದೆ. ಆದರೆ, ನರ್ಸಿಂಗ್ ಕೋರ್ಸ್ ವಿಜ್ಞಾನವನ್ನು ಮೀರಿದ್ದು. ಇಲ್ಲಿ ವಿಜ್ಞಾನದ ಜತೆಗೆ ಮಾನವೀಯ ಸ್ಪರ್ಶದ ಸೇವೆ ಸಹ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ 73 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಾಂಶುಪಾಲರಾದ ಎಂ.ಕೆ. ಅಶ್ವತಿದೇವಿ ಇದ್ದರು.