

ಮೈಸೂರು: ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಲು ನರ್ಸ್‌ಗಳು ತಮ್ಮ ಜೀವದ ಹಂಗು ತೊರೆದು ಸಲ್ಲಿಸಿರುವ ಸೇವೆಯನ್ನು ಇಡೀ ವಿಶ್ವ ಗಮನಿಸಿದ್ದು, ನರ್ಸಿಂಗ್ ವೃತ್ತಿಯು ತ್ಯಾಗದ ಸಂಕೇತ ಎಂದು ಮೇಯರ್ ಶಿವಕುಮಾರ್ ಬಣ್ಣಿಸಿದರು.
ನಗರದ ಜೆಎಸ್‌ಎಸ್ ಶುಶ್ರೂಷ ಶಾಲೆ ಬುಧವಾರ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ 35ನೇ ಸಾಲಿನ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ನಾವು ಬದುಕಿನಲ್ಲಿ ಎಷ್ಟು ಹಣ ಸಂಪಾದನೆ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಎಷ್ಟು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊ ಂಡಿದ್ದೇವೆ ಎಂಬುದು ಮುಖ್ಯ. ನರ್ಸ್‌ಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಮಾನವೀಯತೆಯನ್ನು ಸೇವೆಯ ಮೂಲಕ ತೋರ್ಪ ಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಗಿಗಳ ಸೇವೆಯನ್ನು ದೇವರ ಸೇವೆ ಎಂದು ತಿಳಿದು ನರ್ಸ್‌ಗಳು ಕಾರ್ಯನಿರ್ವಹಿಸಬೇಕು. ಕೆಲಸದಲ್ಲಿ ತಾರತಮ್ಯ ತೋರದೆ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯ ಶುಶ್ರೂಷ ವಿಭಾಗದ ಮುಖ್ಯಸ್ಥೆ ಲತಾ ನೋನಿಸ್ ಮಾತನಾಡಿ, ನರ್ಸ್‌ಗಳ ವೃತ್ತಿ ಜೀವನದ ಹಾದಿ ಸುಲಭವಾಗಿ ಇರುವುದಿಲ್ಲ, ಹಲವಾರು ಸವಾಲುಗಳಿಂದ ಕೂಡಿರುತ್ತದೆ. ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ನರ್ಸ್‌ಗಳು ಸದಾ ಮುಂದೆ ಇರಬೇಕು ಎಂದು ಹೇಳಿದರು.
ನರ್ಸ್‌ಗಳು ಆರೋಗ್ಯ ಸೇವೆಗೆ ಬೆನ್ನೆಲುಬು ಇದ್ದ ಹಾಗೆ. ಇದು ಅತ್ಯುತ್ತಮ ಸೇವಾ ಕ್ಷೇತ್ರವಾಗಿದೆ. ನರ್ಸ್‌ಗಳು ಕೋವಿಡ್ ಸಂದರ್ಭ ತಮ್ಮ ಜೀವದ ಹಂಗು ತೊರೆದು ರೋಗಿಗಳ ಜೀವ ಉಳಿಸಲು ಶ್ರಮಿಸಿದ್ದಾರೆ. ಹಾಗಾಗಿ ಕೋವಿಡ್ ನಂತರ ನರ್ಸ್‌ಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗಿದ್ದು, ಪ್ರಸ್ತುತ ನರ್ಸಿಂಗ್ ಟ್ರೆಂಡಿಂಗ್‌ನಲ್ಲಿರುವ ಹುದ್ದೆಯಾಗಿದೆ. ಹಾಗಾಗಿ ನರ್ಸ್‌ಗಳು ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಅವಕಾಶ ಪಡೆಯುವ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಎಲ್ಲರನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಿ. ಅದೇ ರೀತಿ ವೃತ್ತಿಯನ್ನೂ ಪ್ರೀತಿಸಿ. ನಾನು ನರ್ಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ರೋಗಿಗಳ ಜೀವ ಉಳಿಸುವಲ್ಲಿ ನರ್ಸ್‌ಗಳು ಮಹತ್ವದ ಪಾತ್ರ ನಿರ್ವಹಿಸಿದರೂ ಸಾಕಷ್ಟು ಸಂದರ್ಭದಲ್ಲಿ ನಿಮ್ಮ ಸೇವೆಗೆ ಎಲ್ಲರು ಧನ್ಯವಾದ ಹೇಳುವುದಿಲ್ಲ. ಆದರೆ, ನೀವು ಸಲ್ಲಿಸುವ ಸೇವೆಯಲ್ಲಿ ಸಂತೃಪ್ತಿ ಇರಲಿ. ಹಾಗಾಗಿ ನಗು ಮೊಗದಿಂದ ಸೇವೆ ಸಲ್ಲಿಸಿ. ಮನೆಯಲ್ಲಿ ಏನೇ ಸಮಸ್ಯೆ ಹಾಗೂ ಸವಾಲುಗಳು ಇದ್ದರೂ ರೋಗಿಗಳನ್ನು ನಗುಮೊಗದೊಂದಿಗೆ ಮಾತನಾಡಿಸಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜೆಎಸ್‌ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು, ಶುಶ್ರೂಷ ವಿಭಾಗದ ಮುಖ್ಯಾಧಿಕಾರಿ ಜೆನೆಟ್ ಮತಾಯಸ್, ಪ್ರಾಂಶುಪಾಲರಾದ ಡಾ. ಡಿ.ಎನ್. ರೇಣುಕಾದೇವಿ ಇದ್ದರು.