‘ಜೆಎಸ್‌ಎಸ್ ನ್ಯಾನೋ’ ಉಪಗ್ರಹ ಉಡಾವಣೆಗೆ ಸಿದ್ಧ; ಏಪ್ರಿಲ್ 24ರಂದು ನಭಕ್ಕೆ ಚಿಮ್ಮಲಿದೆ ಸ್ಯಾಟಲೈಟ್

Isro Satellite
Published on

ಮೈಸೂರು: ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ‘ಜೆಎಸ್‌ಎಸ್ ನ್ಯಾನೋ’ ಉಪಗ್ರಹ ಸಿದ್ಧಗೊಂಡಿದ್ದು, ಏಪ್ರಿಲ್ 24ರಂದು ಉಡಾವಣೆಯಾಗಲಿದೆ.


ಉಪಗ್ರಹದ ತೂಕ ಕೇವಲ 1.25 ಕೆ.ಜಿ. ಇದೆ. ಇದನ್ನು ಇಸ್ರೋ ಸಂಸ್ಥೆ ಉಡಾವಣೆ ಮಾಡಲಿದ್ದು, ಬಳಿಕ ನಮ್ಮ ಸಂಸ್ಥೆಯಿಂದ ಅದರ ನಿರ್ವಹಣೆ ಮತ್ತು ನಿಗಾ ವಹಿಸಲಾಗುತ್ತದೆ ಎಂದು ಕುಲಪತಿ ಪ್ರೊ.ಎ.ಎನ್.ಸಂತೋಷ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


‘ಜೆಎಸ್‌ಎಸ್ ನ್ಯಾನೋ’ ಉಪಗ್ರಹ ವೈದ್ಯಕೀಯ ಕ್ಷೇತ್ರದ ಕುರಿತು ಸಂಶೋಧನೆಗೆ ನೆರವಾಗಲಿದೆ. ಗುರುತ್ವಾಕರ್ಷಣೆ ಹೊರಪ್ರದೇಶದಲ್ಲಿ ಒಂದು ನಿರ್ದಿಷ್ಟ ಔಷಧ ಯಾವ ರೀತಿಯಲ್ಲಿ ಬದಲಾವಣೆಯಾಗುತ್ತದೆ, ಅದರ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ, ಅದಕ್ಕೆ ಔಷಧ ಸಹ ಹೇಗೆ ಸ್ಪಂದಿಸುತ್ತದೆ, ಪ್ರತಿಕ್ರಿಯಿಸುತ್ತದೆ ಎಂಬುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಅಧ್ಯಯನ ಮಾಡಲಾಗುವುದು ಎಂದರು.


ಉಪಗ್ರಹ ತಯಾರಿಕೆಗೆ 1.25 ಕೋಟಿ ರೂ. ವೆಚ್ಚವಾಗಿದೆ. ಕೆಲ ವಸ್ತುಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಡಿಸೆಂಬರ್‌ನಲ್ಲಿ ಆಗಬೇಕಿದ್ದ ಉಡಾವಣೆ ದಿನಾಂಕವನ್ನು ಏಪ್ರಿಲ್‌ಗೆ ಮುಂದೂಡಲಾಗಿದೆ. ಜತೆಗೆ, ಈ ಯೋಜನೆಯ ಬಜೆಟ್ ಮೊತ್ತ 80 ಲಕ್ಷ ರೂ. ಮೀರಿ ಕೋಟಿ ರೂ. ದಾಟಿದೆ ಎಂದು ತಿಳಿಸಿದರು.


ಇದರಲ್ಲಿ 16 ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಭಾಗಿಯಾಗಿದ್ದು, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜೆಎಸ್‌ಎಸ್ ಮಹಾವಿದ್ಯಾಪೀಠ ಅಧೀನದ 4 ವಿದ್ಯಾಸಂಸ್ಥೆಗಳು ಕೆಲಸ ಮಾಡಿವೆ ಎಂದರು.


ಈ ಯೋಜನೆಗೆ ಇಸ್ರೋ ಸಂಸ್ಥೆ ಸಹಕಾರ ಮತ್ತು ಬೆಂಬಲವಾಗಿ ನಿಂತಿದೆ. ಅದರ ಸಲಹೆ, ಮಾರ್ಗದರ್ಶನದಿಂದ ಯೋಜನೆಯಲ್ಲಿ ಕೆಲ ಬದಲಾವಣೆ ಹಾಗೂ ಸುಧಾರಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಸ್ರೋದಲ್ಲಿರುವ ವಿವಿ ಹಳೇ ವಿದ್ಯಾರ್ಥಿಗಳೂ ನೆರವು ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net