ಸುತ್ತೂರು ಮಠದಿಂದ ವಿವಿಧ ಪ್ರಶಸ್ತಿ ಪ್ರದಾನ

jss mut award ceremony
Published on

ಮೈಸೂರು: ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದ 2022ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಗುರುವಾರ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ನಗರದ ಶಿಲ್ಪಿ ಎ.ಕಿರಣ್ ಸುಬ್ಬಯ್ಯಗೆ ‘ಎಂ.ವೀರಪ್ಪ ದತ್ತಿ ಪ್ರಶಸ್ತಿ’, ಲೇಖಕಿ ಹೊನ್ನಾವರದ ಡಾ.ಎಚ್.ಎಸ್. ಅನುಪಮಾಗೆ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ‘ಡಿ.ವಿ.ಹಾಲಭಾವಿ ಪ್ರಶಸ್ತಿ’ಯನ್ನು ಸ್ವೀಕರಿಸಬೇಕಿದ್ದ ಕಲಬುರಗಿಯ ಪ್ರಕಾಶ ಗಡಕರ ನಿಧನರಾದ ಹಿನ್ನೆಲೆಯಲ್ಲಿ ಅವರ ಪತ್ನಿ ರಾಜೇಶ್ವರಿ ಸ್ವೀಕರಿಸಿದರು.

ಈ ಸಂದರ್ಭ ಡಾ.ಡಿ.ಎ. ಶಂಕರ್ ರಚನೆಯ ‘ಶೂನ್ಯಸಂಪಾದನೆ ಶಿವಜ್ಞಾನ ಪ್ರಸಾದಿ ಮಹದೇವಯ್ಯ’ ಇಂಗ್ಲಿಷ್ ಕೃತಿ, ಪ್ರೊ.ಮಲೆಯೂರು ಗುರುಸ್ವಾಮಿ ಸಂಪಾದನೆಯ ‘ಜಯಚಾಮರಾಜೇಂದ್ರ ಒಡೆಯರ್ ಜನಶತಮಾನೋತ್ಸವ ವಿಚಾರಸಂಕಿರಣ’, ಡಾ.ಎಸ್.ಆರ್. ಗುಂಜಾಳ ರಚನೆಯ ‘ಪ್ರಸಾದ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹದೇವಿ ಸಂಶೋಧನಾ ಪೀಠದ ನಿರ್ದೇಶಕ ಡಾ.ಕವಿತಾ ರೈ ಮಾತನಾಡಿ, ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರು ಅಕ್ಕಮಹಾದೇವಿ ಅವರ ವ್ಯಕ್ತಿತ್ವವನ್ನು ಅತ್ಯುತ್ತಮವಾಗಿ ಕೃತಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅಕ್ಕ ಅತ್ಯಂತ ಜನಾನುರಾಗಿಯಾಗಿದ್ದರು. 12ನೇ ಶತಮಾನವು ಅಕ್ಕ ಮಹಾದೇವಿಯನ್ನು ಪ್ರಜಾಸತ್ಮಾತಕವಾಗಿ ರೂಪಿಸಿತು ಎಂಬ ಚಿತ್ರಣವನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರ್ಕ ಫೌಂಡೇಷನ್ ಸಂಸ್ಥಾಪಕ ಯೋಗಿ ಶ್ರೀವಾಸ ಅರ್ಕ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net