

ಮಂಡ್ಯ: ಅಧಿಕಾರ ನಡೆಸುವವರು ಕೊಡುವ ಸವಲತ್ತುಗಳನ್ನ ಜನರಿಗೆ ತಲುಪಿಸುವ ಕೆಲಸ ಅಧಿಕಾರಿಗಳದ್ದು. ಅಧಿಕಾರದಲ್ಲಿರುವವರು ಮನೇಲಿ ಮಲಗೋದು, ಅಧಿಕಾರಿಗಳನ್ನ ಹಳ್ಳಿಗೆ ಕಳುಹಿಸುವುದು ಅರ್ಥವಿಲ್ಲದ ವಿಚಾರ ಎಂದು ಡಿಸಿಗಳ ನಡೆ ಹಳ್ಳಿಯ ಕಡೆ ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಬಗ್ಗೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕೊಂಕು ಮಾತನಾಡಿದ್ದಾರೆ.
ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ರೂಪಿಸಿರುವುದೇ ಹಾಸ್ಯಾಸ್ಪದ. ಗ್ರಾಮದ ಸಮಸ್ಯೆಗಳನ್ನ ವಾಸ್ತವಿಕವಾಗಿ ತಿಳಿಯಲು ಎಚ್ಡಿಕೆ ಗ್ರಾಮ ವಾಸ್ತವ್ಯ ಆರಂಭಿಸಿದರು. ಬಿಜೆಪಿಯವರು ಆ ಕಾರ್ಯಕ್ರಮಕ್ಕೆ ಬೇರೆ ಅರ್ಥ ನೀಡಲು ಹೊರಟಿದ್ದಾರೆ ಎಂದರು.
ಅಧಿಕಾರಿಗಳು ಹಳ್ಳಿಗೆ ಹೋಗಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಅಧಿಕಾರ ನಡೆಸುವವರು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ ಕೆಲಸ ಮಾಡಿಸಬೇಕು ಎಂದರು. ಅದನ್ನ ಬಿಟ್ಟು ಹಳ್ಳಿಗಳಿಗೆ ಅಧಿಕಾರಿಗಳನ್ನ ಹೋಗಿ ಮಲಗಿ ಎಂದಿದ್ದಾರೆ. ಆ ಕಾರ್ಯಕ್ರಮದಿಂದ ಇವತ್ತು ನನ್ನ ಕ್ಷೇತ್ರದಲ್ಲಿ ಯಾವ ಅಧಿಕಾರಿಯೂ ಇಲ್ಲ. ಜನ ಸರ್ಕಾರಿ ಕಚೇರಿಗಳಿಗೆ ಬಂದು ವಾಪಾಸ್ ಹೋಗುತ್ತಿದ್ದಾರೆ ಎಂದರು.
ಯಾವ ಪುರುಷಾರ್ಥಕ್ಕೆ ಈ ಕಾರ್ಯಕ್ರಮ..?ಸರ್ಕಾರದ ಆದೇಶದ ಪ್ರಕಾರ ಅಧಿಕಾರಿಗಳು ಹೋಗಿದ್ದಾರೆ. ಆದ್ರೆ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗ್ತಿದೆ. ಸರ್ಕಾರ ಯಾಕೆ ಇಂತಹ ತಪ್ಪು ನಿರ್ಧಾರ ಮಾಡಿದೆ. ಕಷ್ಟ ಸುಖ ತಿಳಿದುಕೊಳ್ಳಲೆಂದೆ ಜನ ಜನಪ್ರತಿನಿಧಿಗಳನ್ನ ಆರಿಸಿದ್ದಾರೆ. ಅವರ ಮೂಲಕ ಸಮಸ್ಯೆ ಆಲಿಸಿ ವಾಸ್ತವಿಕವಾಗಿ ಪರಿಶೀಲಿಸಿ ಅಧಿಕಾರಿಗಳಿಂದ ಬಗೆಹರಿಸಬೇಕು. ಆದ್ರೆ ಸರ್ಕಾರ ಈ ವ್ಯವಸ್ಥೆಯನ್ನೇ ತಿರುಚುವ ಕೆಲಸ ಮಾಡ್ತಿದೆ ಎಂದು ಆರೋಪಿಸಿದರು.