ಮಾ.28 ರಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭ

JSS Medical College graduation ceremony on March 28th
Published on

ಮೈಸೂರು: ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರರ ದಿನಾಚರಣೆಯನ್ನು ಮಾ.28ರಂದು ಸಂಜೆ 4ಕ್ಕೆ ನಗರದ ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಸಚಿವ ಡಾ.ಬಿ.ಮಂಜುನಾಥ ತಿಳಿಸಿದರು.

ಶ್ರೀ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸುವರು. ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಎಚ್.ಬಸವನಗೌಡಪ್ಪ ಅತಿಥಿಗಳಾಗಿ ಭಾಗವಹಿಸುವರು. ಜೈಪುರದ ಮಹಾತ್ಮಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಅಚಲ್ ಗುಲಾಟಿ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, 1984ರಲ್ಲಿ ಪ್ರಾರಂಭವಾದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಆರೋಗ್ಯ ರಕ್ಷಣೆಯಲ್ಲಿ 41 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಒಟ್ಟು 5604 ಎಂಬಿಬಿಎಸ್ ಮತ್ತು 2490 ಸ್ನಾತಕೋತ್ತರ ವೈದ್ಯರು ಈ ಸಂಸ್ಥೆಯಿಂದ ಹೊರ ಹೊಮ್ಮಿದ್ದು, ಅವರು ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಮಾ.28 ರಂದು ಆಯೋಜಿಸಿರುವ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ 208 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 6 ವಿದ್ಯಾರ್ಥಿಗಳು 12 ಚಿನ್ನದ ಪದಕಗಳು ಹಾಗೂ 11 ನಗದು ಬಹುಮಾನ ಸ್ವೀಕರಿಸಲಿದ್ದಾರೆ. ಈ ಸಂದರ್ಭ ಉತ್ತಮ ಪ್ರಾಧ್ಯಾಪಕ ಪ್ರಶಸ್ತಿ, ಸಂಶೋಧನಾ ಶ್ರೇಷ್ಠತಾ ಪ್ರಶಸ್ತಿ, ಉತ್ತಮ ಸಂಶೋಧನಾ ಪ್ರಕಟಣೆಗೆ ವೈ.ಟಿ.ತಾತಾಚಾರಿ ದತ್ತಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net