ಜೆಎಸ್​ಎಸ್​ ಎಂಸಿಎ ಅಧ್ಯಯನ ಸಂಸ್ಥೆ ಉದ್ಘಾಟನೆ

17 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗುಣಮಟ್ಟದ ಶಿಕ್ಷಣಕ್ಕೆ ಮನೆಮಾತಾದ ಜೆಎಸ್​ಎಸ್​ನ 25ನೇ ಅಂಗ ಸಂಸ್ಥೆ ಶ್ರೀ ಮಂಜುನಾಥೇಶ್ವರ ಎಂಸಿಎ ಮಹಾವಿದ್ಯಾಲಯ. ಉಜ್ವಲ ಭವಿಷ್ಯದ ಸಂಕಲ್ಪ ಹೊತ್ತು ಬಂದ ಸಾವಿರಾರು ವಿದ್ಯಾರ್ಥಿಗಳ ಆಶಾಕಿರಣವಾಗಿ ಅಧ್ಯಯನ ಸಂಸ್ಥೆ ಉದ್ಘಾಟನೆಗೊಂಡಿರುವುದು ಜನತಾ ಶಿಕ್ಷಣ ಸಮಿತಿಯ ಹೆಮ್ಮೆಯಾಗಿದೆ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜೆಎಸ್​ಎಸ್​ ಆವರಣದಲ್ಲಿ ಶ್ರೀ ಮಂಜುನಾಥೇಶ್ವರ ಎಂಸಿಎ ಅಧ್ಯಯನ ಸಂಸ್ಥೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಅಧ್ಯಯನಶೀಲತೆ ಮತ್ತು ಶಿಸ್ತುಬದ್ಧ ಜೀವನವು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆ, ಕ್ರೀಡೆ, ಸಂವಹನ ಕೌಶಲ, ವ್ಯಕ್ತಿತ್ವ ವಿಕಸನ ತರಬೇತಿ, ವಿವಿಧ ಉದ್ಯೋಗಗಳಿಗೆ ಅನುಕೂಲವಾಗುವ ವೃತ್ತಿಪರ ಕೋರ್ಸ್​, ಕ್ಯಾಂಪಸ್​ ಸಂದರ್ಶನಕ್ಕೆ ತರಬೇತಿ ನೀಡಲಾಗುವುದು. ಎಂಸಿಎ ಅಧ್ಯಯನ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸುಸಜ್ಜಿತ ವರ್ಗಕೋಣೆ, ಹೈಟೆಕ್​ ಕಂಪ್ಯೂಟರ್​ ಲ್ಯಾಬ್​, ನುರಿತ ಅಧ್ಯಾಪಕ ವೃಂದ ಒಳಗೊಂಡಿರುವುದು ಕೇಂದ್ರದ ವಿಶೇಷವಾಗಿದೆ ಎಂದರು.

ಪ್ರೊ. ಬಾಹುಬಲಿ, ಡಾ. ಕೆ. ಎಚ್​. ನಾಗಚಂದ್ರ, ಡಾ. ಶಿವಪ್ರಸಾದ, ಪ್ರೊ.ಮಂಜುಳಾ ಕಲ್ಮಠ, ಡಾ. ಬಸವರಾಜ ಜಿ., ಪ್ರೊ. ಚಂದ್ರು ಜಟಾರ, ಇತರರು ಇದ್ದರು.

ಡಾ. ಸೂರಜ್​ ಜೈನ್​ ಸ್ವಾಗತಿಸಿದರು. ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು. ಪ್ರೊ. ಮಂಜುನಾಥ ಪೂಜಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net