

ಹನೂರು : ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ ತಿಳಿಸಿದರು.
ತಾಲೂಕಿನ ರಾಮಾಪುರ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿಯನ್ನು ಹೊಂದಿದ್ದ ಶ್ರೀಗಳ ಸಹೃದಯದ ಸೇವಾ ಕಾರ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದ ಶ್ರೀಗಳು ಬಡ ಮಕ್ಕಳ ಅನುಕೂಲಕ್ಕಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯನ್ನು ತೆರೆದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಬಹುತೇಕರು ರಾಜ್ಯದಲ್ಲಿ ಮಾತ್ರವಲ್ಲದೇ ದೇಶ, ವಿದೇಶದಲ್ಲೂ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಸಂತಸದ ಸಂಗತಿ. ಜತೆಗೆ ರಾಷ್ಟ್ರಕವಿ ಶಿವರುದ್ರಪ್ಪ ಅವರ ಸಹ ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಮೆಚ್ಚುಗೆ ಸಂಗತಿ ಎಂದರು.
ರಾಜೇಂದ್ರ ಶ್ರೀಗಳಿಗೆ ರಾಮಾಪುರ ನೆಚ್ಚಿನ ತಾಣವಾಗಿತ್ತು. ಹಾಗಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಕಾರ್ಯನಿಮಿತ್ತ ಆಗಮಿಸುವ ವೇಳೆ ರಾಮಾಪುರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಗೋಪಿಶೆಟ್ಟಿಯೂರಿನಲ್ಲಿ ಸುತ್ತೂರು ಶಾಖಾ ಮಠ ಆರಂಭವಾಯಿತು. ಜತೆಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಅಕ್ಷರ ದಾಸೋಹವನ್ನು ಆರಂಭಿಸಿದ್ದು, ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ ಎಂದು ಬಣ್ಣಿಸಿದರು.
ವಿಜೃಂಭಣೆಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳ ಭಾವಚಿತ್ರವನ್ನು ವಾಹನದಲ್ಲಿರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಬಳಿಕ ಸಂಸ್ಥೆಯ ಆವರಣದಿಂದ ಹೊರಟ ಮೆರವಣಿಗೆಯು ಗೋಪಿಶೆಟ್ಟಿಯೂರು, ಗೆಜ್ಜಲನತ್ತ, ರಾಮಾಪುರ ಹಾಗೂ ಮುತ್ತುಶೆಟ್ಟಿಯೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ನಂದಿಧ್ವಜ ಕಂಬ ಕುಣಿತ, ದೈವ ಭಕ್ತಿಯನ್ನು ಸಾರುವ ಮಕ್ಕಳ ವೇಷಧಾರಿ ಹಾಗೂ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಮೂಲಕ ಶ್ರೀಗಳ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗೋಪಿಶೆಟ್ಟಿಯೂರು ಸುತ್ತೂರು ಶಾಖಾ ಮಠದ ಬಸವಣ್ಣ ಸ್ವಾಮೀಜಿ, ಗುರುಮಲ್ಲೇಶ್ವರ ಮಠದ ಸೋಮಶೇಖರ ಸ್ವಾಮೀಜಿ, ಪ್ರಾಂಶುಪಾಲ ಗಿರಿಯಣ್ಣ, ಮುಖ್ಯ ಶಿಕ್ಷಕರಾದ ನಟರಾಜು, ಶ್ರೀಕಂಠ, ಉಪನ್ಯಾಸಕರಾದ ಸಿದ್ದರಾಜಪ್ಪ, ಸತೀಶ್, ಬಸವರಾಜು ಹಾಗೂ ಇನ್ನಿತರರು ಇದ್ದರು.