

ಧಾರವಾಡ : ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯು ಸುವರ್ಣ ಮಹೋತ್ಸವದ ಸಂಭ್ರದಲ್ಲಿದೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ತಿಳಿಸಿದರು.
ನಗರದಲ್ಲಿ ಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದ ದಣಿವರಿಯದೇ ಸಂಸ್ಥೆಗಳ ಅಭಿವೃದ್ಧಿಗೆ ಕಳೆದ ೪೯ ವರ್ಷಗಳಿಂದ ಶ್ರಮಿಸಿದ ಡಾ.ನ.ವಜ್ರಕುಮಾರರ ಕರ್ಣಧಾರತ್ವದಿಂದ ಕಳೆದ ೫೦ ವರ್ಷಗಳಲ್ಲಿ ಶೈಕ್ಷಣಿಕವಾಗಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಬೃಹದಾಕಾರದಲ್ಲಿ ಬೆಳೆದಿದೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಿಕ್ಷಣ, ಸಿ.ಬಿ.ಎಸ್.ಇ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೋಮಾ ಕಾಲೇಜು, ಐ.ಟಿ.ಐ ಕಾಲೇಜು, ಪದವಿ ಕಾಲೇಜುಗಳು, ಕಾನೂನು ಮಹಾವಿದ್ಯಾಲಯ, ಬಿ.ಎಡ್ ಕಾಲೇಜು, ಎಂ.ಬಿ.ಎ ಕಾಲೇಜು, ಡಾ. ಡಿ. ವೀರೇಂದ್ರ ಹೆಗ್ಗಡೆ ಜನಸಂಖ್ಯಾ ಸಂಶೋಧನಾ ಹಾಗೂ ಆರ್ಥಿಕ ಸಂಶೋಧನಾ ಕೇಂದ್ರ ಅಲ್ಲದೇ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅದೀನದಲ್ಲಿ ನಡೆಯುತ್ತಿವೆ ಎಂದರು.
ಸಮಿತಿ ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೇ ತನ್ನ ವಿವಿಧ ಅಂಗ ಸಂಸ್ಥೆಗಳ ಮುಖಾಂತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರ, ಅನಕ್ಷರಸ್ಥರನ್ನು, ನಿರುದ್ಯೋಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಅಲ್ಲದೇ ಇನ್ನೂ ಹಲವಾರು ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಬರುವ ಸಪ್ಟಂಬರ ಅಥವಾ ಅಕ್ಟೋಬರ್‌ನಲ್ಲಿ ಅಮೃತ ಮಹೋತ್ಸವ ಸಮಾರಂಭ ಆಯೋಜಿಸಲು ತಿರ್ಮಾನಿಸಲಾಗಿದೆ ಎಂದು ಡಾ.ಅಜಿತ ಪ್ರಸಾದ ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ಡಾ.ಸೂರಜ್ ಜೈನ್, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಸುದ್ದಿಗೋಷ್ಠಿಯಲ್ಲಿದ್ದರು.