

ಮೈಸೂರು: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೂ.29ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಮೂಲಚಂದ್ ನಾಹರ್ ಚಾರಿಟಬಲ್ ಟ್ರಸ್ಟ್ ಮತ್ತು ಡಾ.ಸಿ.ಎನ್.ಮೃತ್ಯುಂಜಯಪ್ಪ ಅವರ ಕುಟುಂಬದ ವತಿಯಿಂದ ಸುತ್ತೂರು ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸರ್ಕಾರಗಳು ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ಜನರು ಮುನ್ನೆಚ್ಚರಿಕೆ ವಹಿಸಿ ಸಹಕಾರ ನೀಡಬೇಕು. ಆಗ ಮಾತ್ರ ಕೋವಿಡ್-19 ರೋಗದಿಂದ ಮುಕ್ತವಾಗಲು ಸಾಧ್ಯ. ಸಾರ್ವಜನಿಕ ಸ್ಥಳದಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದರು.
ಶಾಸಕ ಎಲ್.ನಾಗೇಂದ್ರ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಕಾಲೇಜಿನ ನಿರ್ದೇಶಕ ಡಾ.ಬಿ.ಎಂ.ಸಂಜೀವ್, ಡಾ.ಸಿ.ಎನ್. ಮೃತ್ಯುಂಜುಯಪ್ಪ ಹಾಗೂ ಮೂಲಚಂದ್ ನಾಹರ್ ಅವರ ಕುಟುಂಬ ಸದಸ್ಯರು ಹಾಜರಿದ್ದರು.
200 ದಿನಸಿ ಕಿಟ್ ವಿತರಣೆ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ಕೆಲಸಗಾರರು ಸೇರಿ ಸುಮಾರು 200 ಜನರಿಗೆ ಕಿಟ್ ವಿತರಿಸಲಾಯಿತು. 3 ಕೆಜಿ ಅಕ್ಕಿ, ತಲಾ 1 ಕೆಜಿ ಬೇಳೆ, ಉಪ್ಪು, ಈರುಳ್ಳಿ, ರವೆ, ಸಕ್ಕರೆ, ಅರ್ಧ ಲೀ. ಎಣ್ಣೆ, ತಲಾ 1/4 ಕೆ.ಜಿ ಚಹಾಪುಡಿ, ಸಾಂಬಾರ್‌ಪುಡಿ, ಬೆಳ್ಳುಳ್ಳಿಯನ್ನು ಕಿಟ್ ಒಳಗೊಂಡಿತ್ತು.