ಜೆಪಿಸಿ ಭೇಟಿ ಅನಧಿಕೃತ

New Zameer Ahmed New
Published on

ಹುಬ್ಬಳ್ಳಿ : ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿ ಮಸೂದೆ ಜಾರಿಗೆ ತರಲು ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಿದೆಯೇ ಹೊರತು, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅಲ್ಲ. ಹೀಗಾಗಿ, ಸಮಿತಿ ವಿಜಯಪುರಕ್ಕೆ ಭೇಟಿ ನೀಡುತ್ತಿರುವುದು ಅನಧಿಕೃತವಾಗಿದ್ದು, ಸಮಿತಿಗೆ ವಿಚಾರಣೆ ನಡೆಸುವ ಯಾವುದೇ ಅಧಿಕಾರ ಇಲ್ಲ ಎಂದು ರಾಜ್ಯ ವಸತಿ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಬುಧವಾರದಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತನಾಡಿದ ಅವರು, ಜೆಪಿಸಿ ಕೆಲಸ ವಿಧೇಯಕ ತಿದ್ದುಪಡಿಗಾಗಿಯೇ ಹೊರತು ವಕ್ಪ್ ಆಸ್ತಿ ವಿಚಾರಣೆ ಅಲ್ಲ. ಹೀಗಾಗಿ, ಈ ಭೇಟಿಯ ಉದ್ದೇಶ ರಾಜಕಾರಣ ಹೊರತು ಬೇರೆ ಏನೂ ಅಲ್ಲ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಯಾವುದೇ ವಿಷಯಗಳು ಇಲ್ಲ. ವಕ್ಪ್ ಕುರಿತು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದರೂ ಹೋರಾಟ ಮಾಡುತ್ತಿರುವುದು ಚುನಾವಣೆ ಹಾಗೂ ರಾಜಕೀಯಕ್ಕಾಗಿ ಎಂದು ದೂರಿದರು.

ಪ್ರಮೋದ್ ಮುತಾಲಿಕ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖ. ಏಕ್ ದಿಲ್ ದೋ ಜಾನ್ ತರಹ. ಅನ್ನ ನೀಡುವ ರೈತರಿಗೆ ನಮ್ಮ ಸರ್ಕಾರ ತೊಂದರೆ ಕೊಟ್ಟಿಲ್ಲ, ಕೊಡುವುದೂ ಇಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದಾರೆಂದು ಬಿಜೆಪಿಯವರು ಗೊಂದಲ ಸೃಷ್ಟಿ ಮಾಡಿದರು. ಹೀಗಾಗಿ, ವಾಪಸ್ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಲೋಕಾಯುಕ್ತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಯವರ ಮ್ಯಾಚ್​ಫಿಕ್ಸ್ಂಗ್ ಕುರಿತ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್, ಬಿಜೆಪಿ ಆಡಳಿತದಲ್ಲಿಯೂ ಅನೇಕ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡಿದ್ದರು. ಆ ಸಂದರ್ಭದಲ್ಲಿಯೂ ಮ್ಯಾಚ್​ಫಿಕ್ಸಿಂಗ್ ಇತ್ತಾ ಎಂದು ಪ್ರಶ್ನಿಸಿದರು.

2019ರಲ್ಲಿ ಪ್ರಕರಣವೊಂದರಲ್ಲಿ ಸಿಬಿಐ ಅಧಿಕಾರಿಗಳು ನನ್ನನ್ನು ಅರ್ಧ ತಾಸು ವಿಚಾರಣೆ ಮಾಡಿದ್ದರು. ಯಾವುದೇ ತನಿಖೆಯ ವಿಚಾರಣೆಯ ಸಮಯ ಅಧಿಕಾರಿಯ ಮೇಲೆ ನಿಗದಿಯಾಗಿರುತ್ತದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net