

ಪಿರಿಯಾಪಟ್ಟಣ: ತಾಲೂಕಿನ ಜವನಿಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜೆ.ಪಿ.ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತೆ ರೇವಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜವನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮಂಗಳವಾರ ಚುನಾವಣೆ ನಿಗದಿಯಾಗಿದ್ದು ಇವರಿಬ್ಬರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಿಡಿಪಿಒ ಯತೀಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಜೆ.ಪಿ.ಶಿವಕುಮಾರ್, ಸಚಿವ ಕೆ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಸಹಕಾರದೊಂದಿಗೆ ಡೇರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಬಳಿಕ ಸಂಘದ ನಿರ್ದೇಶಕರು ಸದಸ್ಯರು, ಗ್ರಾಮಸ್ಥರು ಸೇರಿ ಗ್ರಾಮದ ಗ್ರಾಮ ದೇವತೆ ದೊಡ್ಡಮ್ಮ ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಿರ್ದೇಶಕರಾದ ಶಿವರಾಜೇಗೌಡ, ಜೆ.ಟಿ ರಾಮೇಗೌಡ, ಡಿ.ಕುಬೇರ, ಯೋಗೇಶ್, ಜೆ.ಆರ್.ಕೃಷ್ಣೆಗೌಡ, ತಿರುಮಲ್ಲೇಶ್, ಎಚ್.ಕೆ.ದ್ರಾಕ್ಷಯಿಣಿ, ಪ್ರೇಮಮ್ಮ, ನವೀನ್‌ಕುಮಾರ್ ಇತರರು ಇದ್ದರು.