

ಜೊಯಿಡಾ: ತಾಲೂಕಿನ ಹಲವು ಹೆದ್ದಾರಿಗಳು ಗುಂಡಿಗಳಿಂದ ತುಂಬಿದ್ದು, ಪ್ರಯಾಣಿಕರು ಓಡಾಟಕ್ಕೆ ಸಂಕಷ್ಟಪಡುವಂತಾಗಿದೆ. ಮಳೆಗಾಲ ಪ್ರಾರಂಭವಾದಾಗ ಚಿಕ್ಕದಾಗಿದ್ದ ಗುಂಡಿಗಳು ಈಗ ವಿಸ್ತಾರವಾಗಿದ್ದು, ವಾಹನಗಳ ಟಯರ್ಗಳಿಗೆ ಕುತ್ತು ತರುತ್ತಿವೆ.
ಅರ್ಧ ಗಂಟೆಯ ಪ್ರಯಾಣಕ್ಕೆ ಈಗ ಒಂದು ತಾಸು ಬೇಕಾಗಿದೆ. ತಾಲೂಕಿಗೆ ಆಗಮಿಸುತ್ತಿರುವ ಪ್ರವಾಸಿಗರು ಇಲ್ಲಿನ ಜನಪ್ರತಿನಿಧಿಗಳ ಬಗ್ಗೆ ಹಿಡಿಶಾಪ ಹಾಕುತ್ತ ತೆರಳುವ ಪರಿಸ್ಥಿತಿ ನಿರ್ವಣವಾಗಿದೆ.
ಬೆಳಗಾವಿ-ಕಾರವಾರ ರಾಜ್ಯ ಹೆದ್ದಾರಿ-34 ರಲ್ಲಿ ಜೊಯಿಡಾದಿಂದ ಕದ್ರಾ ತನಕ ಹಲವು ಕಡೆಗಳಲ್ಲಿ ರಸ್ತೆ ಸಾಕಷ್ಟು ಹಾಳಾಗಿದೆ. ಕುಂಬಾರವಾಡಾದಿಂದ ಅಣಶಿ ಮಧ್ಯದಲ್ಲಿ ಹಲವು ಕಡೆ ಚಿಕ್ಕ ವಾಹನ ಹೋಗಲು ಸಾಧ್ಯವಾಗದ ರೀತಿಯಲ್ಲಿ ಹೊಂಡಗಳಿಂದ ತುಂಬಿದೆ. ಮಳೆಯೂ ಕೂಡಾ ಹೆಚ್ಚಾಗಿರುವ ಕಾರಣ ಈ ಹೊಂಡಗಳಲ್ಲಿ ನೀರು ತುಂಬಿದ್ದು, ಸಾಕಷ್ಟು ಚಿಕ್ಕ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ರಾತ್ರಿ ವೇಳೆಯಂತೂ ಇಲ್ಲಿ ವಾಹನ ಚಲಾಯಿಸುವುದೇ ಸಾಹಸದ ಕೆಲಸವಾಗಿದೆ.
ಬೆಳಗಾವಿ-ಕಾರವಾರ ನಡುವೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ಗಳು ಈ ರಸ್ತೆಗಳ ಅವ್ಯವಸ್ಥೆಯಿಂದಾಗಿ ನಿಗದಿತ ವೇಳೆಗಿಂತ ತಡವಾಗಿ ಗಮ್ಯ ಸ್ಥಾನ ತಲುಪುತ್ತಿವೆ. ಇತ್ತೀಚೆಗಷ್ಟೇ ಸಾರಿಗೆ ನಿಗಮಕ್ಕೆ ಕೆಲವು ಹೊಸ ಬಸ್ಗಳು ಬಂದಿವೆ. ಇದರಿಂದ ರಸ್ತೆ ನಡುವೆ ಕೆಟ್ಟು ನಿಲ್ಲುತ್ತಿದ್ದ ಬಸ್ಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಇಂಥ ರಸ್ತೆಯಲ್ಲಿ ಅವು ಕೂಡ ಶೀಘ್ರದಲ್ಲಿ ಹಾಳಾಗುವುದರಲ್ಲಿ ಸಂಶಯ ಇಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಎನ್ಡಬ್ಲು್ಯಕೆಆರ್ಟಿಸಿ ಚಾಲಕರೊಬ್ಬರು. ಖಾಸಗಿ ಟ್ಯಾಕ್ಸಿ ಚಾಲಕರು ಈ ಹೆದ್ದಾರಿಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬರೀ ಹೊಂಡ: ಪೋಟೋಲಿಯಿಂದ-ನಂದಿಗದ್ದಾ ಮಧ್ಯದ ಕಾನೇರಿಯ ಸಮೀಪ ಸುಮಾರು 4 ಕಿಮೀ ಡಾಂಬರು ರಸ್ತೆಯಲ್ಲಿ ಬರೀ ಹೊಂಡಗಳೇ ಇವೆ. ಇಲ್ಲಿಂದ ಉಳವಿ ಹೋಗುವ ರಸ್ತೆ ಹಾಳಾಗಿ ತಗ್ಗುಗಳು ನಿರ್ವಣವಾಗಿ ಚಿಕ್ಕ ಕೆರೆಗಳಂತಾಗಿ ನೀರು ತುಂಬಿಕೊಂಡಿದೆ. ಆದರೆ, ದಿನೇದಿನೆ ಹೊಂಡಗಳ ಗಾತ್ರ ಹೆಚ್ಚುತ್ತಲೇ ಸಾಗಿದೆ. ಜಿಲ್ಲಾ ಕೇಂದ್ರ ಕಾರವಾರಕ್ಕೆ ಕಚೇರಿ ಕೆಲಸಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವುದು ಅತ್ಯಂತ ಪ್ರಯಾಸದ ಕೆಲಸವಾಗಿದೆ. ಕ್ಯಾಸಲ್ರಾಕ್ ಚಾಂದೇವಾಡಿ ರಸ್ತೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಹೆದ್ದಾರಿ ಸಂಚಾರ ಬಹು ದುಸ್ತರ
ಬೆಳಗಾವಿಯಿಂದ ಗೋವಾಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಎನ್ಎಚ್4ಎ ಪರಿಸ್ಥಿತಿ ದೇವರಿಗೇ ಪ್ರೀತಿ. ಮೊದಲು ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಅಸೂಲಿ ಬ್ರಿಜ್, ಬರಲಕೋಡ, ದೇವಳ್ಳಿ ರೈಲ್ವೆ ಗೇಟ್, ಹಾಥಿ ಬ್ರಿಜ್, ಕ್ಯಾಸಲ್ರಾಕ್, ಜಗಳಗಟ್ಟಿ ನರ್ಸರಿ ಸಮೀಪ ಹೀಗೆ ವಿವಿಧೆಡೆ ಬ್ರಿಜ್ಗಳು ಹಾಳಾಗಿವೆ. ಅಲ್ಲದೆ, ರಾಮನಗರದಿಂದ ಅನಮೋಡವರೆಗೆ ಹೆದ್ದಾರಿಯಲ್ಲಿ ಸಾಕಷ್ಟು ಹೊಂಡಗಳು ಬಿದ್ದಿವೆ. ಇದರಿಂದ ಸೆ. 30ರವರೆಗೆ ಆರು ಹಾಗೂ ಅದಕ್ಕಿಂತ ಹೆಚ್ಚಿನ ಚಕ್ರದ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗೋವಾದ ಲಾರಿ ಚಾಲಕರ ಸಂಘ ಈ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದು, ಪರಿಶೀಲಿಸಿ ವರದಿ ನೀಡುವಂತೆ ಡಿಸಿ ಎನ್ಎಚ್ಎಐಗೆ ಪತ್ರ ಬರೆದಿದ್ದರು. ಆದರೆ, ಈ ನಡುವೆ ಪೊಲೀಸರು ಅಕ್ರಮವಾಗಿ ಭಾರಿ ವಾಹನಗಳನ್ನೂ ಇದೇ ರಸ್ತೆಯಲ್ಲಿ ಬಿಡುತ್ತಿರುವ ಆರೋಪವಿದೆ. ಇದರಿಂದ ಹೊಂಡಗಳು ಇನ್ನೂ ಹೆಚ್ಚಿವೆ. ಈ ಹೆದ್ದಾರಿಯ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಣಶಿಯಿಂದ ಜೊಯಿಡಾ ತಾಲೂಕು ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಹೊಂಡಗಳಿಂದ ಅಪಘಾತ ಆಗುತ್ತಿದೆ. ಸರ್ಕಾರ ಕೂಡಲೆ ರಸ್ತೆಯನ್ನ ಸರಿಪಡಿಸುವ ಕಾರ್ಯ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು.ಅರುಣ ನಾಯ್ಕ ಅಣಶಿ ಗ್ರಾಪಂ ಅಧ್ಯಕ್ಷ ಗೋವಾ ರಸ್ತೆ ನಿರ್ವಹಣೆ ಇಲ್ಲದ ಕಾರಣ ಕಳೆದ ಸುಮಾರು 7 ವರ್ಷಗಳಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಈ ವರ್ಷವಂತೂ ರಸ್ತೆ ರಿಪೇರಿ ಕೂಡ ಮಾಡದೆ ಹಾಗೇ ಬಿಡಲಾಗಿದೆ. ಸರ್ಕಾರ ರಸ್ತೆ ಸರಿಪಡಿಸಿ, ನಮ್ಮಂತ ನೂರಾರು ಜನರಿಗೆ ಉಪಕಾರ ಮಾಡಬೇಕು.| ವಾಸು ವಾಹನ ಚಾಲಕ, ರಾಮನಗರ