ಸಂತೋಷದ ಚಾರಣ ಆಗದಿರಲಿ ನಾಪತ್ತೆ ಚರಣ! ಕೊಂಚ ಹಾದಿ ತಪ್ಪಿದರೂ ಪ್ರಾಣಕ್ಕೆ ಬರಲಿದೆ ಕುತ್ತು

ವಿಜಯವಾಣಿ
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಸಾರ್ವತ್ರಿಕ ರಜಾದಿನಗಳು ಹಾಗೂ ವಾರಾಂತ್ಯಗಳು ಅರಣ್ಯ ಇಲಾಖೆ ಪಾಲಿಗೆ ಕಷ್ಟದ ದಿನಗಳಾಗುತ್ತಿವೆ. ಸಾವನದುರ್ಗ ಮತ್ತು ರಾಮದೇವರ ಬೆಟ್ಟಕ್ಕೆ ದೇವರ ದರ್ಶನಕ್ಕೆ ಬರುವವರು, ಸ್ಥಳೀಯ ಪರಿಸರದ ಮಾಹಿತಿ ಇಲ್ಲದೆ ಚಾರಣ ಕೈಗೊಳ್ಳುವವರು ದಾರಿ ತಪ್ಪುತ್ತಾರೆ. ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದರೂ ಬಹುತೇಕ ಮಂದಿ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಚಾರಣಕ್ಕೆ ತೆರಳಿದವರು ನಾಪತ್ತೆಯಾದಾಗ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ.

ರಾಮದೇವರ ಬೆಟ್ಟ ಅಷ್ಟೊಂದು ಕಷ್ಟದಾಯಕವಲ್ಲದ ಚಾರಣವಾಗಿರುವ ಕಾರಣ, ಈವರೆಗೆ ನಾಪತ್ತೆ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಸಾವನದುರ್ಗದ ಏಕಶಿಲಾ ಬೆಟ್ಟದಲ್ಲಿ ಟ್ರೆಕ್ಕಿಂಗ್ ಕಷ್ಟಸಾಧ್ಯವೆನಿಸಿದೆ. ಸುತ್ತಲೂ ಸಾವಿರಾರು ಹೆಕ್ಟೇರ್ ಪ್ರದೇಶದ ಕಾಡು ಇರುವ ಕಾರಣ, ದಾರಿ ತಪ್ಪಿದರೆ ಹುಡುಕುವುದು ಸವಾಲು. ವಾರದಿಂದೀಚೆಗೆ ಜಿಲ್ಲೆಯ 2 ಬೆಟ್ಟ ಪ್ರದೇಶದಲ್ಲಿ ಚಾರಣದ ವೇಳೆ ಹಾದಿ ತಪ್ಪಿದ್ದ ಒಟ್ಟು 7 ಮಂದಿಯನ್ನು ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಪತ್ತೆ ಮಾಡಿ ಕರೆತರುವಂತಾಯಿತು. ಇಂತಹ ಘಟನೆಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಇದಕ್ಕೆ ಚಾರಣಿಗರಿಗೆ ಮಾಹಿತಿಯ ಕೊರತೆಯೇ ಪ್ರಮುಖ ಕಾರಣ.

ಮಾಹಿತಿ ಪಡೆಯಿರಿ: ಚಾರಣ ಆರಂಭಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಮತ್ತು ಅನುಮತಿ ಪಡೆದರೆ ಸೂಕ್ತ ಎನ್ನುವುದು ಅಧಿಕಾರಿಗಳ ಸಲಹೆ. ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಕ್ಕೆ ಬರುವ ಕಾರಣ ಆರಂಭ, ಅಂತ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಸೂಕ್ತ ಸಲಹೆ ನೀಡುವ ಜತೆಗೆ ಎಷ್ಟು ಮಂದಿ ಚಾರಣಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಭ್ಯವಾಗಲಿದೆ.

ಗೈಡ್​ಗಳಿಗೆ ಕೆಲಸ ಇಲ್ಲ: ಚಾರಣಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅರಣ್ಯ ಇಲಾಖೆ ಗೈಡ್​ಗಳನ್ನು ನೇಮಕ ಮಾಡಿಕೊಂಡಿತ್ತು. ಆದರೆ, ನೋಂದಾಯಿತ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವ ಕಾರಣ ಹಾಗೂ ಹೆಚ್ಚಿನವರು ಗೈಡ್​ಗಳ ಅಗತ್ಯ ಇಲ್ಲದಂತೆ ಚಾರಣ ಕೈಗೊಳ್ಳುವ ಕಾರಣ ನಿಗದಿತ ಆದಾಯ ಇಲ್ಲದೆ ಗೈಡ್​ಗಳು ಸಹ ಕೆಲಸ ಬಿಟ್ಟಿದ್ದಾರೆ.

ನೋಂದಣಿ ಮರೆಯದಿರಿ: ರಾಮನಗರ ಜಿಲ್ಲೆಯಲ್ಲಿ ಮಾಗಡಿಯ ಸಾವನದುರ್ಗ ಮತ್ತು ರಾಮನಗರ ರಾಮದೇವರ ಬೆಟ್ಟದಲ್ಲಿ ಮಾತ್ರ ಚಾರಣ ಮಾಡಲು ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ https://karnatakaecotourism.com/ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಬೇಕು. ಆದರೆ ಬಹುತೇಕ ಚಾರಣಿಗರಿಗೆ ಇದರ ಮಾಹಿತಿಯೇ ಇಲ್ಲ. ಸ್ಥಳೀಯವಾಗಿಯೂ ಯಾವುದೇ ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ. ಅವಘಡ ಸಂಭವಿಸುತ್ತಲೇ ಅಧಿಕಾರಿಗಳ ಮೊರೆಹೋಗುತ್ತಾರೆ.

"ಚಾರಣ ಒಳ್ಳೆಯ ಹವ್ಯಾಸ. ಆದರೆ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರೆ ಒಳ್ಳೆಯದು. ಇದರಿಂದ ದಾರಿ ತಪ್ಪಿ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಅನಾಹುತಗಳನ್ನು ತಪ್ಪಿಸಲು ಸಾಕಷ್ಟು ನಿಯಮಗಳನ್ನು ಜಾರಿಗೆ ತರಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ" ರಾಮಕೃಷ್ಣಪ್ಪ ಡಿಸಿಎಫ್, ರಾಮನಗರ ಪ್ರಾದೇಶಿಕ ವಿಭಾಗ.

ಅತಿಕ್ರಮ ಪ್ರವೇಶವೇ ಹೆಚ್ಚು: ಜಿಲ್ಲೆಯಲ್ಲಿ ಸದ್ಯಕ್ಕೆ ಎರಡೇ ಬೆಟ್ಟಗಳಲ್ಲಿ ಮಾತ್ರ ಚಾರಣಕ್ಕೆ ಅನುಮತಿ ಇದೆ. ಉಳಿದ ಬೆಟ್ಟಗಳಿಗೆ ಅನುಮತಿ ಇಲ್ಲವಾದರೂ ಅತಿಕ್ರಮ ಪ್ರವೇಶ ಮಾಡಿ ಚಾರಣ ಮಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ವಾರ ಬೆಂಗಳೂರಿನಿಂದ ಬಂದಿದ್ದ 6 ಯುವತಿಯರ ದಂಡು ಅರಣ್ಯ ಇಲಾಖೆ ಅನುಮತಿ ಪಡೆಯದೆ ಹಂದಿಗೊಂದಿ ಬೆಟ್ಟಕ್ಕೆ ಚಾರಣ ಹೋಗಿ ದಾರಿ ತಪ್ಪಿತ್ತು. ಆದರೆ 112ಕ್ಕೆ ಕರೆ ಮಾಡಿ ನೆರವು ಕೋರಿದ್ದರಿಂದ ಸ್ಥಳೀಯರ ನೆರವಿನೊಂದಿಗೆ ಎಲ್ಲರನ್ನೂ ರಕ್ಷಿಸಲಾಗಿತ್ತು.

ಇರಲಿ ಎಚ್ಚರ: ಆದಷ್ಟು ಬೆಳಗಿನ ಹೊತ್ತು ಚಾರಣ ಕೈಗೊಂಡರೆ ಒಳಿತು = ಚಾರಣಿಗರು ತಮ್ಮ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಬೇಕು ಗುಂಪಿನಲ್ಲಿ ಚಾರಣ ಮಾಡಬೇಕು =ಸಂಜೆ ಚಾರಣ ದಾರಿ ತಪ್ಪುವ ಜತೆಗೆ ಕಾಡು ಪ್ರಾಣಿಗಳ ದಾಳಿಗೂ ಅವಕಾಶ ಮಾಡಿಕೊಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net