

ಮಡಿಕೇರಿ:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಅವರ 516ನೇ ಜನ್ಮದಿನೋತ್ಸವದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗೆ ಬಾರಿಯಂಡ ಜೋಯಪ್ಪ ಅವರನ್ನು ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ರಾಜ್ಯಮಟ್ಟದ 'ಕರುನಾಡ ಪ್ರಭು ಕೆಂಪೇಗೌಡ' ಪ್ರಶಸ್ತಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಸನ್ಮಾನಿಸಿದರು.
ಪ್ರಶಸ್ತಿ ಸ್ಮರಣಿಕೆಯೊಂದಿಗೆ ಬೆಳ್ಳಿ ಪದಕ ಮತ್ತು 25ಸಾವಿರ ರೂ. ನಗದು ಹೊಂದಿದೆ. ಸನ್ಮಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾರಿಯಂಡ ಜೋಯಪ್ಪ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ನನ್ನನ್ನು ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದ್ದು ನನಗೆ ಅತೀವ ಖುಷಿ ಕೊಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ ಎನ್. ಅಶ್ವಥ್ ನಾರಾಯಣ, ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಎಂ. ಕೃಷ್ಣ ಗೌಡ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಮತ್ತಿತರರು ಇದ್ದರು.