

ಬೆಂಗಳೂರು: ಪಡಿತರ ವ್ಯವಸ್ಥೆಯಲ್ಲಿ ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಗುಣವಾಗಿ 2 ಕೆಜಿ ಅಕ್ಕಿ ಕಡಿಮೆ ಮಾಡಿ ಜೋಳ, ರಾಗಿ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್, ಅನ್ನಭಾಗ್ಯದಲ್ಲಿ ಸಾಕಷ್ಟು ಅಕ್ರಮಗಳಾಗಿವೆ. ಅವಶ್ಯಕತೆಗಿಂತ ಅಕ್ಕಿ ಹೆಚ್ಚು ಕೊಡಲಾಗುತ್ತಿದೆ. ಕಾಳಸಂತೆಯಲ್ಲೂ ಮಾರಾಟವಾಗುತ್ತಿದೆ. 691 ಪ್ರಕರಣ ದಾಖಲಾಗಿದ್ದರೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮತ್ತೆ ಉಪ ಪ್ರಶ್ನೆ ಎತ್ತಿದ ಯತ್ನಾಳ್, ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ರಾಗಿಯನ್ನು ಪಡಿತರ ವ್ಯವಸ್ಥೆಯಲ್ಲಿ ಸೇರಿಸಲು ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್ನ ಶಿವಾನಂದ ಪಾಟೀಲ್, ಮೂರು ವರ್ಷಗಳ ಹಿಂದೆ ಖರೀದಿಸಿದ ತೊಗರಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಪಡಿತರದಲ್ಲಿ ತೊಗರಿಯನ್ನೂ ಕೊಡಿ ಎಂದು ದನಿಗೂಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಅನ್ನಭಾಗ್ಯ ಯೋಜನೆಯಲ್ಲಿ ಸದ್ಯ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಕೊಡಲು ನಿರ್ಧರಿಸಲಾಗಿದೆ. ಸರ್ಕಾರದ ಜತೆ ರ್ಚಚಿಸಿ ತೊಗರಿಬೇಳೆ ವಿತರಣೆಗೂ ಕ್ರಮಕೈಗೊಳ್ಳುವುದಾಗಿ ಹೇಳಿದರು. ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತೊಗರಿಯನ್ನೂ ಕೊಡಿ. ಆದರೆ, ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಧಾನ್ಯ ಕಡಿಮೆ ಮಾಡಬೇಡಿ. ಅನರ್ಹರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಿ ಎಂದು ಒತ್ತಾಯಿಸಿದರು.
‘ಸಪ್ತಪದಿ’ಗೆ ಸರ್ಕಾರದಿಂದ ನೆರವು
ರಾಜ್ಯದ 100 ‘ಎ’ ದರ್ಜೆ ದೇವಸ್ಥಾನಗಳಲ್ಲಿ ‘ಸಪ್ತಪದಿ’ ಕಾರ್ಯಕ್ರಮಕ್ಕೆ ವೆಚ್ಚವಾಗುವ ಪಾಲಿನಲ್ಲಿ ಸರ್ಕಾರದ ನೆರವು ಸೇರಿದೆ ಎಂದು ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು. ಜೆಡಿಎಸ್ನ ಟಿ.ಎ.ಶರವಣ, ದೇವಸ್ಥಾನದ ಹುಂಡಿಗಳ ಹಣ ಬಳಸಿಕೊಂಡು ಸಾಮೂಹಿಕ ವಿವಾಹ ಮಾಡಿ ಸರ್ಕಾರ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಕೋಟ ಅಲ್ಲಗಳೆದು, ಎಲ್ಲ ‘ಎ’ ದರ್ಜೆ ದೇವಸ್ಥಾನಗಳ ಆದಾಯ ಉತ್ತಮವಾಗಿಲ್ಲ.
ಕೆಲ ಜಿಲ್ಲೆಗಳಲ್ಲಿ ‘ಎ’ ದರ್ಜೆ ದೇವಸ್ಥಾನಗಳಿಲ್ಲ. ಕಲ್ಯಾಣ ಮಂಟಪ ಇತ್ಯಾದಿ ಅನುಕೂಲತೆಗಳ ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಾಮೂಹಿಕ ವಿವಾಹಕ್ಕೆ ತಗುಲುವ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದರು.