ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರೂ ಕೈಜೋಡಿಸಿ: ಡಾ.ಮಂತರ್‌ಗೌಡ

prasasthi vitharane
Published on

ಮಡಿಕೇರಿ: ಸಮಾಜದ ಹಿತದೃಷ್ಟಿಯಿಂದ ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರು ಕೂಡಾ ಕೈಜೋಡಿಸಿ ಶ್ರೀಸಾಮಾನ್ಯರಿಗೆ ನ್ಯಾಯ ಕೊಡಿಸುವಲ್ಲಿ ಸಹಕಾರ ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೋಮವಾರಪೇಟೆಯ ಮಹಾದಾನಿಯಾಗಿದ್ದ ತಮ್ಮ ಅಜ್ಜಿ ಸಾಕಮ್ಮ ಅವರನ್ನು ಸ್ಮರಿಸಿಕೊಂಡ ಡಾ.ಮಂತರ್‌ಗೌಡ, ಸಾಕಮ್ಮ ಜನರಿಗಾಗಿ ದಾನ ಮಾಡಿದರೆ, ರಾಜಕಾರಣಿಗಳು ಜನಪ್ರಿಯತೆಗಾಗಿ ದಾನ ಮಾಡುತ್ತಾರೆ ಎಂದು ಹಾಸ್ಯವಾಗಿ ಹೇಳಿದರು. ಇದೇ ಸಂದರ್ಭ ಡಾ.ಮಂತರ್ ತಮ್ಮ ಅಜ್ಜಿ ಸಾಕಮ್ಮ ಜ್ಞಾಪಕಾರ್ಥ ಸಂಘದಲ್ಲಿ ಎರಡು ದತ್ತಿನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯಾವುದೇ ಪ್ರಶಸ್ತಿಗಳು ನಮ್ಮ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾಗುತ್ತವೆ. ಡಾಮಂತರ್ ಗೌಡ ಅವರು ಸ್ಥಾಪಿಸಲು ಉದ್ದೇಶಿಸಿದರುವ ದತ್ತಿನಿಧಿಯನ್ನು ಕಾಫಿ ಉದ್ಯಮಕ್ಕೆ ಸಂಬಂಧಿಸಿದ ಉತ್ತಮ ವರದಿಗೆ ನೀಡುವಂತಾಗಬೇಕೆಂದು ಕುಟ್ಟಪ್ಪ ಅಭಿಪ್ರಾಯ ಮಂಡಿಸಿದರು.

ಪತ್ರಕರ್ತರಿಗೆ ನಿವೇಶನ ಒದಗಿಸಲು ಮನವಿ: ಪತ್ರಕರ್ತರಿಗೆ ಸರ್ಕಾರದಿಂದ ನಿವೇಶನ ಕೊಡಿಸಲು ಪ್ರಯತ್ನಿಸಿ ಎಂದು, ಸಂಘದ ಕಾನೂನು ಸಲಹೆಗಾರ ಮತ್ತು ವಕೀಲ ಪಿ.ಕಷ್ಣಮೂರ್ತಿ ಶಾಸಕರನ್ನು ವಿನಂತಿಸಿದರು. ಪತ್ರಕರ್ತರಿಗೆ ಸರ್ಕಾರದ ಯಾವುದೇ ಸೌಲಭ್ಯ ಕೊಡಿಸುವ ಸಂದರ್ಭ ಸಂಘದ ಅಧ್ಯಕ್ಷರನ್ನು ಪರಿಗಣನೆಗೆ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಂಘದ ಅಧ್ಯಕ್ಷರು ಸದಸ್ಯರ ಯಾವುದೇ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದನೆ ನೀಡುತ್ತಿರುವುದು ಮತ್ತು ಮಾಧ್ಯಮ ಸ್ಪಂದನದ ಮೂಲಕ ಪತ್ರಕರ್ತರು ಸಮಾಜಕ್ಕೆ ಸ್ಪಂದನೆ ನೀಡುತ್ತಿರುವುದು ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ವಾರ್ಷಿಕ ಧತ್ತಿ ಪ್ರಶಸ್ತಿಯನ್ನು ಹರೀಶ್ ಮಾದಪ್ಪ, ಇಸ್ಮಾಯಿಲ್ ಕಂಡಕರೆ, ಮನೋಜ್, ಸಂತೋಷ್ ರೈ, ಹೆಚ್.ಕೆ.ಜಗದೀಶ್, ರವಿ ಹಿರೀಕರ, ದಿನೇಶ್ ಮಾಲಂಬಿ, ಜಗದೀಶ್ ಜೋಡುಬೀಟಿ, ಗೋಪಾಲ್ ಸೋಮಯ್ಯ, ಅನುಕಾರ್ಯಪ್ಪ, ಶಿವರಾಜ್, ಪಿ.ವಿ.ಅಕ್ಷಯ್, ಎಚ್.ಜೆ.ರಾಕೇಶ್, ಚಂದ್ರಮೋಹನ್ ಹಾಗೂ ಕಿಶೋರ್ ಕುಮಾರ್ ಶೆಟ್ಟಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ರಾಜ್ಯ ಸಂಘದ ಪ್ರಶಸ್ತಿ ಪುರಸ್ಕೃತರಾದ ವಿಶ್ವ ಕುಂಬೂರು, ಜಯಂತಿ ಪೇರಿಯಂಡ, ಪಿ.ವಿ.ಅಕ್ಷಯ್, ಶಶಿ ಸೋಮಯ್ಯ, ಕಾಂಗೀರ ಬೋಪಣ್ಣ, ದ.ಕ.ಜಿಲ್ಲಾ ಪ್ರಶಸ್ತಿ ಪಡೆದ ಇಸ್ಮಾಯಿಲ್ ಕಂಡಕರೆ, ಮಾದ್ಯಮ ಅಕಾಡಮಿ ಪ್ರಶಸ್ತಿ ಪಡೆದ ಅನುಕಾರ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾಧ್ಯಕ್ಷತೆಯನ್ನು ಸಂಘದ ಆಧ್ಯಕ್ಷೆ ಬಿ.ಆರ್.ಸವಿತಾ ರೈ ವಹಿಸಿದ್ದರು. ರಾಜ್ಯ ಸಮಿತಿ ನಿರ್ದೇಶಕ ಟಿ.ಎನ್.ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಜರಿದ್ದರು. ನಿರ್ದೇಶಕ ಹೆಚ್.ಕೆ.ರಾಕೇಶ್ ಕಾರ್ಯಕ್ರಮ ನಿರೂಪಿಸಿದರೆ, ಚೆನ್ನನಾಯಕ್ ಪ್ರಾರ್ಥಿಸಿ, ಪ್ರಶಸ್ತಿ ವಿಜೇತರ ಪಟ್ಟಿ ಓದಿದರು. ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರು ಪಾಲ್ಗೊಂಡಿದ್ದರು.

ವಾರ್ಷಿಕ ಮಹಾಸಭೆ

ಇದಕ್ಕೂ ಮುನ್ನ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ನಿರ್ದೇಶಕರಾದ ಟಿ.ಎನ್.ಮಂಜುನಾಥ್, ಸಂಘದ ಕಾನೂನು ಸಲಹೆಗಾರ ಮತ್ತು ವಕೀಲ ಪಿ.ಕಷ್ಣಮೂರ್ತಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net