

ಬೆಂಗಳೂರು: ಸಮಾಜದಲ್ಲಿ ನಡೆಯುವ ಒಳಿತು ಕೆಡುಕಿನ ಬಗ್ಗೆ ಸಾರ್ವಜನಿಕರಿಗೆ ನೈಜ ಮಾಹಿತಿಯನ್ನು ತಿಳಿಸಿಕೊಡುವ ಪತ್ರಕರ್ತರಿಗೆ ಬುದ್ದಿವಂತಿಕೆ ಜತೆಗೆ ಹೃದಯವಂತಿಕೆಯೂ ಬೇಕು ಎಂದು ಐಆರ್‌ಎಸ್ ಅಧಿಕಾರಿ ಶಾಂತಪ್ಪ ಕುರುಬರ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯ ಬಳಿಕ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಭಾನುವಾರ ಮಾತನಾಡಿದರು.
ಸಮಾಜದಲ್ಲಿ ಶೇ.3 ಜನರು ಮಾತ್ರ ಅಪರಾಧಿಗಳಾಗಿದ್ದು, ಉಳಿದ ಶೇ.97 ಜನಸಾಮಾನ್ಯರು. ಆದರೆ ಪೊಲಿಸ್ ಠಾಣೆಗಳಲ್ಲಿ ಶೇ.3 ಜನರಿಗೆ ಬಳಸುವ ಭಾಷೆಯನ್ನು ಉಳಿದವರಿಗೂ ಬಳಸುತ್ತೇವೆ. ಪತ್ರಕರ್ತರು ಮನಸಾಕ್ಷಿಯಿಂದ ಸಮಾಜಕ್ಕೆ ಉತ್ತಮ ಎನಿಸುವ ವಿಚಾರಗಳನ್ನು ಪ್ರಸಾರ ಮಾಡಿದ್ದಲ್ಲಿ ಕಾನೂನು ಮೀರಿ ಮಾನವೀಯತೆಯಿಂದ ಬದಕಲು ಸಾಧ್ಯ. ಸಂಘವು 75ರ ಅಮೃತ ಸಂಭ್ರಮದಲ್ಲಿದ್ದರೂ, ಪತ್ರಕರ್ತರ ಪಾಲಿಗೆ ಅಮೃತ ಬಂದಿದೆಯಾ? ಎಂದು ಅವರು ಪ್ರಶ್ನಿಸಿದರು.
ಮಕ್ಕಳಿಂದ ಮೊಬೈಲ್ ದೂರ ಇಡಿ:
ನಾನು ಪಿಯುಸಿಯಲ್ಲಿ ಥರ್ಡ್ ಕ್ಲಾಸ್ ಪಾಸ್ ಆಗಿದ್ದೇನೆ ಅಷ್ಟೆ. ಆದರೆ, ಪತ್ರಕರ್ತರ ಮಕ್ಕಳು ಶೇ.90 ಅಂಕ ಪಡೆದು ಗಮನ ಸೆಳೆದಿದ್ದಾರೆ. ನಾನೇ ಐಆರ್‌ಎಸ್ ಪಾಸ್ ಮಾಡಿದ್ದೇನೆ ಎಂದಾದಲ್ಲಿ ನೀವು (ವಿದ್ಯಾರ್ಥಿಗಳು) ನನಗಿಂತ ಬುದ್ದಿವಂತರು. ಮಕ್ಕಳು ಚನ್ನಾಗಿ ಓದಬೇಕು. ಮೊಬೈಲ್ ತುಂಬಾ ಅಪಾಯಕಾರಿ. ಆದ್ದರಿಂದ ಮಕ್ಕಳಿಂದ ಮೊಬೈಲ್ ದೂರ ಇಡಿ. ಪುಸ್ತಕದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಕಿವಿಮಾತು ಹೇಳಿದರು.
ಪ್ರತಿಭಾ ಪುರಸ್ಕಾರ ವಿತರಣೆ:
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿಯ 24 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, 31 ಪಿಯುಸಿ, ನಾಲ್ವರು ಪದವಿ, ಇಬ್ಬರು ಸ್ನಾತಕೋತ್ತರ, ಮೂವರು ಇಂಜಿನಿಯರಿಂಗ್, ಒಬ್ಬರು ವೈದ್ಯಕೀಯ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಾಲ್ವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಖಜಾಂಚಿ ಬಿ.ಎನ್. ಮೋಹನ್ ಕುಮಾರ್, ನಿರ್ದೇಶಕರಾದ ರಾಜೇಂದ್ರ ಕುಮಾರ್, ವಿನೋದ್ ಕುಮಾರ್ ನಾಯ್ಕ, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ಆನಂದ್ ಬೈದನಮನಿ, ಕೆ.ಎಸ್.ಸೋಮಶೇಖರ್, ಕೆ.ವಿ.ಪರಮೇಶ್, ವನಿತಾ, ನಯನಾ, ಕೃಷ್ಣಕುಮಾರ್ ಹಾಗೂ ಕಾರ್ಯದರ್ಶಿ (ಪ್ರಭಾರ) ಎಚ್.ಎಸ್.ಕೆಂಪರಾಜು ಉಪಸ್ಥಿತರಿದ್ದರು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮವೂ ಕಾರಣವಾಗಿದೆ. ಪ್ರಸ್ತುತ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವುದೇ ಮಾಧ್ಯಮಗಳು. ಮಾಧ್ಯಮ ಪ್ರಜಾಪ್ರಭುತ್ವದ 4ನೇ ಅಂಗವಾಗಿದ್ದು, ಅಂತಹ ಪತ್ರಕರ್ತರನ್ನು ಜೀವಂತ ಇಟ್ಟಿರುವುದೇ ಪತ್ರಕರ್ತರ ಸಹಕಾರ ಸಂಘ. ಸಂಘವು 75 ವರ್ಷ ಉಳಿದಿರುವುದೇ ಆಶ್ಚರ್ಯದ ಸಂಗತಿಯಾಗಿದೆ.
- ರಿಜ್ವಾನ್ ಅರ್ಷದ್, ಶಾಸಕ